ಕೇರಳ: ಮಗನು ಕಲಿಯುತ್ತಿರುವ ಶಾಲಾ ಶಿಕ್ಷಕಿಯ ಬಳಿ 500 ರೂಪಾಯಿ ಸಾಲ ಕೇಳಿದ ಮಹಿಳೆಯ ಖಾತೆಗೆ ಒಂದೇ ದಿನದಲ್ಲಿ ಆಶ್ಚರ್ಯಕರ ಎಂಬಂತೆ 51 ಲಕ್ಷ ರೂಪಾಯಿ ಹರಿದು ಬಂದಿದೆ.

ಈ ಒಂದು ಘಟನೆಯು ನಡೆದಿದ್ದು ಪಾಲಕ್ಕಾಡ್ ನ ಕೂಟ್ಟನಾಡ್ ನಿವಾಸಿ ಸುಭದ್ರ ಎಂಬ ಮಹಿಳೆ ತನ್ನ ಮಗನ ಶಿಕ್ಷಕಿಯಾದ ಗಿರಿಜಾ ಹರಿಕುಮಾರ್ ಬಳಿ ಕಷ್ಟದ ಸಮಯದಲ್ಲಿ ರೂ. 500 ಸಹಾಯ ಕೇಳಿದ್ದರು. ಶಿಕ್ಷಕಿಯು ಮಹಿಳೆಗೆ ಐನೂರರ ಬದಲು ಒಂದು ಸಾವಿರ ರೂಪಾಯಿ ಸಾಲ ನೀಡಿದ್ದಲ್ಲದೆ ಮಹಿಳೆಯ ಕುಟುಂಬದ ಬವಣೆಯನ್ನು ವೀಡಿಯೋ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ದಾನಿಗಳು ಸುಭದ್ರರ ಖಾತೆಗೆ ಒಂದೇ ದಿನದಲ್ಲಿ 51 ಲಕ್ಷ ರೂಪಾಯಿಯನ್ನು ಜಮೆ ಮಾಡಿದ್ದಾರೆ.
ಮಹಿಳೆಯ ಗಂಡ ಕೂಲಿ ಕಾರ್ಮಿಕರಾಗಿರುವ ರಾಜನ್ ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದರು. ಎರಡನೆಯ ಮಗ ಅತುಲ್ ರಾಜ್ ‘ಸೆರೆಬ್ರಲ್ ಪಾಲ್ಸಿ’ ಕಾಯಿಲೆಯಿಂದ ಬಳಲುತ್ತಿದ್ದು, ಅವನನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಲು ಮಹಿಳೆಗೆ ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಇದರಲ್ಲಿ ಮೂರನೆಯ ಮಗ ಅಭಿಷೇಕ್ ರಾಜ್ ಕಲಿಯುತ್ತಿರುವ ಶಾಲೆಯ ಶಿಕ್ಷಕಿ ಗಿರಿಜಾ ಹರಿಕುಮಾರ್ ಅವರ ಒಂದು ಪೋಸ್ಟ್ ಇಷ್ಟೆಲ್ಲ ಹಣ ಹರಿದು ಬರಲು ಕಾರಣವಾಗಿದೆ ಎನ್ನಲಾಗಿದೆ.ಈ ಒಂದು ಘಟನೆಯಿಂದ ಮತ್ತೊಮ್ಮೆ ಕೇರಳಿಗರು ತಮ್ಮ ಮಾನವಿಯ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ.