ಬೇರೆ ದೇಶಗಳಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. ಇದರಿಂದ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಇಂದು(ಡಿಸೆಂಬರ್ 26) ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವರಾದ ಆರ್.ಅಶೋಕ್, ಸುಧಾಕರ್ ಕೊವಿಡ್ ಸಭೆ ನಡೆಸಿದರು. ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಜ್ಞರ ಜತೆ ಚರ್ಚಿಸಿ ಕೆಲ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್ ಕೋವಿಡ್ ಗೈಡ್ಲೈನ್ಸ್ ಬಗ್ಗೆ ಮಾತನಾಡಿದರು.
ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಬಾರ್, ಪಬ್ ಹಾಗೂ ಹೊಟೇಲ್ಗಳಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆಯನ್ನು ಪಡೆದಿರಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.
ಎಷ್ಟು ಟೇಬಲ್ ಇದೆಯೋ ಅಷ್ಟು ಚೇರ್ಗೆ ಮಾತ್ರ ಅನುಮತಿ ನೀಡಲಾಗಿದೆ. ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುವವರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎಂದರು.
ಸುವರ್ಣ ಸೌಧದ ಸಮಿತಿ ಕೊಠಡಿಯಲ್ಲಿ ಇಂದು (ಡಿ.26) ಸಚಿವರಾದ ಆರ್ ಅಶೋಕ್ ಮತ್ತು ಸುಧಾಕರ್ ನೇತೃತ್ವದಲ್ಲಿ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ವರ್ಚುವಲ್ ಮೂಲಕ ತಜ್ಞರ ಸಭೆ ನಡೆಯಿತು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಂಜಿ ರೋಡ್ ಸೇರಿದಂತೆ ಎಲ್ಲಾ ಕಡೆ ಈ ನಿಯಮ ಕಡ್ಡಾಯವಾಗಿದೆ. ಹೊಸ ವರ್ಷಾಚರಣೆ ಸಂಭ್ರಮಾಚರಣೆ ವೇಳೆ ಗರ್ಭಿಣಿಯರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.
ಸಲಹಾ ಸಮಿತಿ ನೀಡಿದ ಸೂಚನೆಗಳೇನು?
ಸಲಹಾ ಸಮಿತಿಯವರು ವಿದೇಶದಿಂದ ಬರುವವರನ್ನು ಮಾನಿಟರ್ ಮಾಡಲು ಸಲಹೆ ನೀಡಿದ್ದಾರೆ. ಹೀಗಾಗಿ 2 ಆಸ್ಪತ್ರೆಗಳಲ್ಲಿ ಮೀಸಲಿಡುತ್ತೇವೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಆಸ್ಪತ್ರೆಗಳನ್ನು ತೆರೆಯುತ್ತೇವೆ. ವಿದೇಶಿ ಪ್ರಯಾಣಿಕರನ್ನು ಬೆಂಗಳೂರು ಬೌರಿಂಗ್ ಹಾಗೂ ಮಂಗಳೂರಿನ ವೆನ್ಲಾಕ್ ನಲ್ಲಿ ಐಸೋಲೇಶನ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯ;
ಇನ್ನೂ ಹೆಚ್ಚಾಗಿ ಜನ ಒಂದೇ ಕಡೆ ಸೇರುವ ಚಿತ್ರಮಂದಿರಗಳು, ಶಾಲಾ-ಕಾಲೇಜುಗಳಲ್ಲೂ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ. ಚಿತ್ರಮಂದಿರಗಳಲ್ಲಿ ಮಾಸ್ಕ್ ಕಡ್ಡಾಯ. ಶಾಲಾ-ಕಾಲೇಜ್ನ ತರಗತಿಗಳಗೆ ವಿದ್ಯಾರ್ಥಿಗಳು ಪ್ರವೇಶಕ್ಕೂ ಮುಂಚೆ ಸ್ಯಾನಿಟೈಸ್ ಮಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಮಿಟಿ:
ಕಳೆದ ಬಾರಿಯಂತೆ ಈ ಬಾರಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗಿದೆ. ಎಲ್ಲ ಆಸ್ಪತ್ರೆಗಳ ಪರಿಶೀಲನೆಗಾಗಿ ಕಮಿಟಿ ರಚನೆ ಮಾಡಿದ್ದೇವೆ. ಆಕ್ಸಿಜನ್, ಐಸಿಯು ಬೆಡ್ ಪರಿಶೀಲನೆ ಮಾಡಬೇಕು. ಮಾಸ್ಕ್ ಹಾಕದೆ ಇದ್ದರೇ ಸದ್ಯಕ್ಕೆ ದಂಡ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ದಂಡದ ಬಗ್ಗೆ ನಿರ್ಧಾರ ಮಾಡುತ್ತೇವೆ. ಸಿಎಂ ಬೊಮ್ಮಾಯಿ ದೆಹಲಿಗೆ ಹೋಗಿದ್ದಾರೆ. ಅವರು ಬಂದ ಬಳಿಕ ಚರ್ಚಿಸಿ ದಂಡದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿಕೆ:
ಬೆಂಗಳೂರು, ಮಂಗಳೂರು ಏರ್ಪೋರ್ಟ್ನಲ್ಲಿ ಱಂಡಮ್ ಆಗಿ ಕೊರೊನಾ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಅಲ್ಲಿ ರೋಗ ಲಕ್ಷಣಗಳು ಕಂಡು ಬಂದರೇ ಕ್ವಾರಂಟೈನ್ ಮಾಡುತ್ತೇವೆ. ಪಾಸಿಟಿವ್ ಬಂದರೇ ಜಿನೋಮಿಕ್ ಸಿಕ್ವೆನ್ಸಿಂಗ್ ಕಳಿಸುತ್ತೇವೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡಿದರು.
ಬೂಸ್ಟರ್ ಡೋಸ್ ಕಡ್ಡಾಯವಲ್ಲ, ಅತ್ಯವಶ್ಯಕ:
ಬೂಸ್ಟರ್ ಡೋಸ್ ಹೆಚ್ಚಿನ ಜನರಿಗೆ ಕೊಡಲು ಕ್ರಮ ಕೈಗೊಳ್ಳುತ್ತೇವೆ. ಸದ್ಯ 21 ಪರ್ಸೆಂಟ್ ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. 21 ಪರ್ಸೆಂಟ್ ಇರೋದನ್ನು 50 ಪರ್ಸೆಂಟ್ಗೆ ಏರಿಸಬೇಕಿದೆ. ಸರ್ಕಾರದ ಜೊತೆ ಜನರು ಸಹಕಾರ ಕೊಡಬೇಕು. ಬೂಸ್ಟರ್ ಡೋಸ್ ಕಡ್ಡಾಯವಲ್ಲ, ಅತ್ಯವಶ್ಯಕವಾಗಿದೆ. ಕಡ್ಡಾಯ ಅಂತಾ ನಮ್ಮಲ್ಲಿ ಕಾನೂನು ಇಲ್ಲ. ಎರಡು ಡೋಸ್ ಅನ್ನೂ ಕಡ್ಡಾಯ ಮಾಡಿರಲಿಲ್ಲ. ಹೀಗಿದ್ದರೂ ಜನರು ಸ್ವಯಂ ಪ್ರೇರಣೆಯಿಂದ ಪಡೆದಿದರು. ಹೀಗಾಗಿ ಬೂಸ್ಟರ್ ಡೋಸ್ ಸಹ ಪಡೆಯಬೇಕು ಎಂದು ಸುಧಾಕರ್ ಮನವಿ ಮಾಡಿದರು