ಇಂದೋರ್: ಇಂದೋರ್‌ನಲ್ಲಿ ಮಂಗಳವಾರ ನಡೆದ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 90 ರನ್‌ಗಳಿಂದ ಜಯಗಳಿಸಿದ ಭಾರತ ತಂಡ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಪ್ರತಿಷ್ಠೆಗಾಗಿ ಹೋರಾಡಿದ ಕಿವೀಸ್ ಭಾರಿ ಮುಖಭಂಗ ಅನುಭವಿಸಿದೆ.
ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಗಿಲ್ ಆರು ದಿನಗಳ ನಂತರ ಇಂದು 112 ರನ್ ಗಳಿಸಿದರು, ಆದರೆ ರೋಹಿತ್ 101 ರನ್ ಬಾರಿಸಿ ಔಟಾದರು. ಇಬ್ಬರ ಅಮೋಘ ಆಟದಿಂದ ಭಾರತ 9 ವಿಕೆಟ್ ಗಳಿಗೆ 385 ರನ್ ಕಲೆ ಹಾಕಿತು. ಕೊಹ್ಲಿ 36, ಹಾರ್ದಿಕ್ 54 , ಶಾರ್ದೂಲ್ ಠಾಕೂರ್ 25 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ, ನ್ಯೂಜಿಲ್ಯಾಂಡ್ ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ 138 ರನ್ ಗಳಿಸಿದರು. ಆದರೆ ಎಂಟು ಓವರ್‌ಗಳು ಬಾಕಿ ಇರುವಾಗಲೇ ಬೌಲಿಂಗ್ ದಾಳಿಗೆ ಸಿಲುಕಿದ ಕಾರಣ ಉಳಿದ ಸಹ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. 41.2 ಓವರ್ ಗಳಲ್ಲಿ 295 ರನ್ ಗಳನ್ನು ಗಳಿಸಿ ಸೋಲಿಗೆ ಶರಣಾಯಿತು. ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರೆ, ಯುಜ್ವೇಂದ್ರ ಚಹಾಲ್ ಎರಡು ವಿಕೆಟ್ ಪಡೆದರು.
ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳಿಂದ ಮತ್ತು ಹೈದರಾಬಾದ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು 12 ರನ್‌ಗಳಿಂದ ಗೆದ್ದುಕೊಂಡಿತ್ತು. ತಂಡಗಳು ಮುಂದಿನ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಸೆಣಸಲಿದ್ದು, ಶುಕ್ರವಾರ ರಾಂಚಿಯಲ್ಲಿ ಆರಂಭವಾಗಲಿದೆ.