ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ವಿಕಾಸ ಯಾತ್ರೆ ಕೈಗೊಂಡಿದ್ದು, ನಿನ್ನೆ ಯಾತ್ರೆಯ ಸಮಾರೋಪ ಸಮಾರಂಭ ಬಿ.ಸಿ ರೋಡ್ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಈ ಹಿಂದೆ ಕೋಮು ಗಲಭೆಗಳಿಂದ ಬಂಟ್ವಾಳ ಕ್ಷೇತ್ರ ನಲುಗಿತ್ತು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಂಟ್ವಾಳದ ಚಿತ್ರಣ ಬದಲಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಸಾಮರಸ್ಯ ನೆಲೆಸಿದೆ ಎಂದರು.
ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಡಿಎಂಕೆ, ಕಾಂಗ್ರೆಸ್ ಹೇಳಿದ ಸುಳ್ಳುಗಳು ಮತ್ತೆ ರಿಪೀಟ್ ಆಗುತ್ತಿದೆ. ರೇಷನ್ ಕಾರ್ಡ್ಗೆ ಪ್ರತಿ ತಿಂಗಳು 1000 ರೂಪಾಯಿ ನೀಡುವುದಾಗಿ ಹೇಳಿದ್ದರು. ಘೋಷಣೆ ಮಾಡಿ 21 ತಿಂಗಳಾಯಿತು, ಇದುವರೆಗೆ ಯಾರೊಬ್ಬರಿಗೂ 1 ರೂಪಾಯಿ ಕೊಟ್ಟಿಲ್ಲ. ಕೇವಲ ಸುಳ್ಳು ಹೇಳಿಕೊಂಡು ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಸುಳ್ಳು ಭರವಸೆ ನೀಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದರು.
ಪ್ರಿಯಾಂಕಾ ಗಾಂಧಿ ಅವರು ಬಂದು ಪ್ರತಿ ಮನೆಯ ಮಹಿಳೆಗೆ 2000 ಸಾವಿರ ಕೊಡುತ್ತೇವೆ ಅಂತ ಹೇಳುತಿದ್ದಾರೆ. ಕರ್ನಾಟಕದ ಜನ ಕಾಂಗ್ರೆಸ್ನ ಸುಳ್ಳು ಭರವಸೆಗಳನ್ನ ನಂಬಬೇಡಿ. ಸುಳ್ಳ ಭರವಸೆಗಳ ಬಗ್ಗೆ ಜಾಗರೂಕರಾಗಿರಬೇಕು. ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಂಟಿಎಂ ಇದ್ದ ಹಾಗೆ. ಅಧಿಕಾರಕ್ಕೆ ಬಂದು ಎಟಿಎಂ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಲೋಕಸಭಾ ಚುನಾವಣೆಗೆ ಎಟಿಎಂ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಇದಕ್ಕೆ ಕರ್ನಾಟಕದ ಜನ ಅವಕಾಶ ನೀಡಬಾರದು ಎಂದರು.
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಶಾಸಕರು ತಮ್ಮ ಕ್ಷೇತ್ರ ಸುತ್ತಾಟದಲ್ಲಿ ಬ್ಯುಸಿಯಾಗಿ ಸಾಧನೆಗಳನ್ನು ಜನರತ್ತ ಕೊಂಡೊಯ್ಯುತ್ತಿದ್ದಾರೆ. ಮಂತ್ರಿಗಳು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಅದರಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ಸಾಧನೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮ ವಿಕಾಸ ಯಾತ್ರೆ ಕೈಗೊಂಡಿದ್ದರು. ಜನವರಿ 14ರಿಂದ ಆರಂಭಗೊಂಡಿದ್ದ ಈ ಯಾತ್ರೆ ನಿನ್ನೆ ಬಿ.ಸಿ.ರೋಡ್ನಲ್ಲಿ ಸಮಾರೋಪಗೊಂಡಿದೆ. ಈ ಕಾರ್ಯಕ್ರಮದ ಮೂಲಕ ಶಾಸಕರು ಪ್ರತಿಯೊಂದು ಗ್ರಾಮಗಳಿಗೆ ಯಾತ್ರೆ ಕೈಗೊಂಡು ಸಾಧನೆಗಳನ್ನು ಜನರ ಮುಂದಿಟ್ಟಿದ್ದಾರೆ.