2000 ಇಸವಿ ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಶೇಕಮಲೆಯಲ್ಲಿ ನಾಡು ಕಟ್ಟಿದ ನೇತಾರ ಶಿಕ್ಷಣದ ಬಗ್ಗೆ ಕ್ರಾಂತಿಯನ್ನೇ ಸೃಷ್ಟಿಸಿದ್ದ ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ ಮರ್ಹೂಂ ಶೇಕಮಲೆ ಮಮ್ಮುಂಞಿ ಹಾಜಿಯವರು ದಾನವಾಗಿ ನೀಡಿದ ಸ್ಥಳದಲ್ಲಿ ಮರ್ಕಝ್ ಮಹಿಳಾ ಕಾಲೇಜ್ ಪ್ರಾರಂಭಗೊಳ್ಳುವ ಶುಭ ಸುದ್ದಿ ಊರಿನ ನಾಲ್ದೆಸೆಗಳಲ್ಲಿ ಪಸರಿಸಿದಾಗ ಅತೀವ ಸಂತೋಷಗೊಂಡವರಲ್ಲಿ ನಾನೂ ಒಬ್ಬ ಕಾರಣ ಇಷ್ಟೇ ನಮ್ಮೂರಿನಲ್ಲಿ ಮಹಿಳಾ ಕಾಲೇಜ್ ಎಂಬ ಒಂದು ಹೊಸ ಪರಿಕಲ್ಪನೆಯ ಶಿಕ್ಷಣ ಸಂಸ್ಥೆಯೊಂದು ತಲೆ ಎತ್ತುತ್ತಿದೆ ಎಂದು ಮಾತ್ರವಾಗಿತ್ತು ಅಂದಿನ ಸಂತೋಷಕ್ಕೆ ಏಕೈಕ ಕಾರಣ.
ಆದರೆ ಇಂತಹಾ ವ್ಯವಸ್ಥೆ ಒಂದರ ಅನಿವಾರ್ಯತೆ ಹಾಗೂ ಅಗತ್ಯತೆಯ ಬಗ್ಗೆ ಅಂದು ಅಷ್ಟೇನೂ ನನ್ನ ಅನುಭವಕ್ಕೆ ಬಂದಿರಲಿಲ್ಲ ಆ ಸಮಯದಲ್ಲಿ ಹೆಣ್ಣು ಮಕ್ಕಳು ಕಲಿಯಲು ಅಷ್ಟೇನೂ ಆಸಕ್ತಿ ವಹಿಸುತ್ತಿರಲಿಲ್ಲ ಸುರಕ್ಷಿತ ಶಾಲಾ ಕಾಲೇಜ್ ಗಳ ಕೊರತೆಯೋ ಶಿಕ್ಷಣದ ಅನಿವಾರ್ಯತೆಯ ಬಗೆಗಿನ ತಿಳುವಳಿಕೆಯ ಕೊರತೆಯೋ ಮಹಿಳೆಯರ ಸಮೃದ್ಧ ಬದುಕಿಗೆ ಧಾರ್ಮಿಕ ಹಾಗೂ ಲೌಕಿಕವಾಗಿ ಅವಶ್ಯಕ ಹಾಗೂ ವ್ಯವಸ್ಥಿತ
ಶಿಕ್ಷಣ ಪದ್ಧತಿಯ ಆವಿಷ್ಕಾರದ ಕೊರತೆಯೋ ಯಾಕೋ ಏನೋ ನಮ್ಮ ಮನೆಯ ಹತ್ತಿರದಲ್ಲಿಯೇ ಸರಕಾರಿ ಶಾಲೆ ಇದ್ದರೂ ನನ್ನ ಇಬ್ಬರು ಅಕ್ಕಂದಿರಲ್ಲಿ ದೊಡ್ಡಾಕೆ ಐದನೇ ತರಗತಿ ವರೆಗೆ ಕಲಿತು ಶಿಕ್ಷಣಕ್ಕೆ ವಿದಾಯ ಹೇಳಿದ್ದರೆ ಸಣ್ಣಾಕೆ ಆರನೇ ತರಗತಿಯಲ್ಲಿ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟಿದ್ದಳು ಇಬ್ಬರು ತಂಗಿಯಂದಿರಲ್ಲಿ
ಒಬ್ಬಾಕೆ ತಂಗಿ ಏಳನೇ ತರಗತಿ ವರೆಗೆ ಮಾತ್ರ ಕಲಿತಿದ್ದಳು ಇನ್ನೊಬ್ಬಾಕೆ ತಂಗಿ ಹೇಗಾದರೂ ಒಂದು ಕಿಲೋ ಮೀಟರ್ ದೂರದ ಕುಂಬ್ರಕ್ಕೆ ನಡೆದುಕೊಂಡೇ ಹೋಗಿ ಹತ್ತನೇ ತರಗತಿ ವರೆಗೆ ಕಲಿತು ಕಲಿಕೆ ನಿಲ್ಲಿಸುವ ಹೊತ್ತಿನಲ್ಲಿ ಊರಿನಲ್ಲಿಯೇ ಮರ್ಕಝ್ ಮಹಿಳಾ ಕಾಲೇಜ್ ಇದ್ದುದರಿಂದ ಸೆಕೆಂಡ್ ಪಿ ಯು ಸಿ ತನಕ ಕಲಿಯುವ ಅವಕಾಶ ಅವಳಿಗೆ ಮಾತ್ರ ದೊರೆಯಿತು.
ಮೊಬೈಲ್ ಬಳಕೆಯ ಆಹಾಕಾರ ಶಾಲಾ ಕಾಲೇಜ್ ಗೆ ಸರಕಾರಿ ಬಸ್ ನಲ್ಲಿ ಸಂಚಾರ ಕಾಲದ ಆಚಾರದ ಹೆಸರಿನಲ್ಲಿ ಸದ್ದು ಮಾಡುವ ಅನಾಚಾರ ಅಂದು ಇದ್ಯಾವುದೂ ಇಲ್ಲದ ಕಾರಣ ಅಕ್ಕ ತಂಗಿಯಂದಿರ ಸುರಕ್ಷಿತತೆ ಎಂಬ ಶಬ್ದವು ನಮ್ಮ ಮನೆಯಲ್ಲಿ ಅರಿವಿಗೂ ಬಂದಿರಲಿಲ್ಲ ಅದರ ಬಗ್ಗೆ ನಮ್ಮ ಮನೆಯಲ್ಲಿ ಅಷ್ಟೇನೂ ಚಿಂತೆಯನ್ನೂ ಕೂಡಾ ಮಾಡಿರಲಿಲ್ಲ ಅಕ್ಕ ತಂಗಿಯರನ್ನು ಮದುವೆ ಮಾಡಿಸಿ ಕೊಡಲಾಯಿತು
ಕಲಿತಿದ್ದಾರೋ ಕಲಿಯಲಿಲ್ಲವೋ ಅವರೆಲ್ಲರೂ ಈಗ ಸುಖ ಸಂತೋಷದ ಸಮೃದ್ಧ ಬದುಕು ಸಾಗಿಸುತ್ತಿದ್ದಾರೆ ಎಂಬುದು ವಾಸ್ತವ.
2005 ರಲ್ಲಿ ನನಗೆ ಮದುವೆ ಆಯಿತು
ಮೊದಲ ಮಗು ಹೆಣ್ಣಾಗಿಯೇ ಹುಟ್ಟಿತು ಶಾಲೆ ಹಾಗೂ ಮದ್ರಸಕ್ಕೆ ಸೇರಿಸಲಾಯಿತು ಮಗಳು ದೊಡ್ಡವಳಾದಂತೆ ಮತ್ತಷ್ಟು ಮಕ್ಕಳನ್ನು ಅಲ್ಲಾಹು ನಮಗೆ ಕರುಣಿಸ ತೊಡಗಿದ ಕಾಲ ಬದಲಾಗತೊಡಗಿತು ಶಿಕ್ಷಣದ ಬಗ್ಗೆ ಜನ ಜಾಗೃತಿ ಮೂಡ ತೊಡಗಿತು ಶಿಕ್ಷಣದ ಗುಣಮಟ್ಟ ಕನ್ನಡ ಮೀಡಿಯಂ ಇಂಗ್ಲಿಷ್ ಮೀಡಿಯಂ ಕಲಿಕಾ ಕ್ಯಾಂಪಸ್ ಹಾಸ್ಟೆಲ್ ವ್ಯವಸ್ಥೆ ಸರಕಾರಿ ಬಸ್ ಬದಲಿಗೆ ಶಿಕ್ಷಣ ಸಂಸ್ಥೆಯಿಂದಲೇ ಬಸ್ ಸೌಲಭ್ಯ ಅಥವಾ ಇನ್ನಿತರ ಖಾಸಗಿ ಆಟೋ, ಕಾರ್ ಗಳ ಅವಲಂಬನೆ ಎಲ್ಲವೂ ಜೋರಾಗಿ ಚಾಲ್ತಿಗೆ ಬಂತು ಎಲ್ಲವನ್ನೂ ಅಳೆದು ತೂಗಿ ಅತ್ಯುತ್ತಮ ಗುಣಮಟ್ಟದ ಧಾರ್ಮಿಕ ಮತ್ತು ಲೌಕಿಕ ವಿದ್ಯೆ ಎರಡೂ ಕೂಡಾ ಒಂದೇ ಕ್ಯಾಂಪಸ್ ನಲ್ಲಿ ಸಿಗುತ್ತದೆ ಎಂಬ ಸದುದ್ದೇಶ ಹಾಗೂ ಸಂತೋಷದಿಂದ ಹಿರಿಯ ಮಗಳನ್ನು ಏಳನೇ ತರಗತಿಗೆ ಮುಹಿಮ್ಮಾತ್ ವಿದ್ಯಾ ಸಂಸ್ಥೆಗೆ ಸೇರಿಸಲಾಯಿತು. ಎರಡು ವರ್ಷಗಳ ಬಳಿಕ ನನ್ನ ಮಗನನ್ನೂ ಅದೇ ಸಂಸ್ಥೆಗೆ ಸೇರಿಸಿದ್ದೆ ಮಗ ಈಗಲೂ ಅದೇ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದಾನೆ. ಸಾವಿರಾರು ಮಕ್ಕಳಿಗೆ ಅರಿವು, ಅನ್ನ, ವಸತಿ ನೀಡಿ ಅವರ ಭವಿಷ್ಯಕ್ಕೊಂದು ಭದ್ರ ಬುನಾದಿ ಹಾಕುವ ಮುಹಿಮ್ಮಾತ್ ಇಂದು ಶಿಕ್ಷಣದ ಒಂದು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ ಎಂಬುದು ಎಲ್ಲರೂ ತಿಳಿದಿರುವ ವಿಷಯ. ಹಿರಿಯ ಮಗಳು ಮುಹಿಮ್ಮಾತ್ ನಲ್ಲಿ
ನಾಲ್ಕು ವರ್ಷಗಳ ಕಾಲ ಕಲಿತು ಅತ್ಯುತ್ತಮ ಶ್ರೇಣಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಮದ್ರಸದಲ್ಲಿ ಹತ್ತನೇ ತರಗತಿ ಪೂರ್ತಿಗೊಳಿಸಿದಳು ಕಳೆದ ವರ್ಷ ಬಹಳಷ್ಟು ಅನಾಥ ಹೆಣ್ಣು ಮಕ್ಕಳ ಸೇರ್ಪಡೆ ಅರ್ಜಿ ಬಂದಿದ್ದರಿಂದ ಹಾಸ್ಟೆಲ್ ಸೌಲಭ್ಯದ ಪರಿಮಿತಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ ಪೂರ್ತಿಗೊಳಿಸಿದ ಯತೀಮ್ ಅಲ್ಲದ ಅನೇಕ ಹೆಣ್ಣು ಮಕ್ಕಳನ್ನು ಬಿಡುಗಡೆ ಮಾಡುವುದು ಮುಹಿಮ್ಮಾತ್ ಸಂಸ್ಥೆಗೆ ಅನಿವಾರ್ಯವಾಗಿ ಕಂಡು ಬಂತು ಈ ಕಾರಣದಿಂದ ನನ್ನ ಮಗಳೂ ಒಲ್ಲದ ಮನಸ್ಸಿನಿಂದ ಅಲ್ಲಿಂದ ಬರಬೇಕಾಯಿತು.
ನಿಜಕ್ಕೂ ಹೇಳಬೇಕೆಂದರೆ ಆಗ ನನಗೆ ನನ್ನ ಮಗಳ ವಿದ್ಯಾರ್ಜನೆಯ ಜತೆಗೆ ಅವಳ ಸುರಕ್ಷಿತತೆಯ ಬಗೆಗಿನ ಆಲೋಚನೆ ಅನುಭವಕ್ಕೆ ಬಂತು ಚಿತ್ತ ಅತ್ತಿತ್ತ ವಿಚಲಿತಗೊಳ್ಳದೇ ನಮ್ಮ ತೀರ್ಮಾನ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಮಾತ್ರವೇ ಆಗಿತ್ತು ಅದೃಷ್ಟ ಎಂಬಂತೆ ಕಳೆದ ವರ್ಷ ಈ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗ ಕೂಡಾ ಪ್ರಾರಂಭಿಸಿದ್ದರಿಂದ
ಅದುವೇ ನಮ್ಮ ಆಯ್ಕೆ ಕೂಡಾ ಆಗಿತ್ತು. ಪ್ರಥಮ ಪಿ.ಯು.ಸಿ ಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಗೊಂಡ ನನ್ನ ಮಗಳು
ಈಗ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದಾಳೆ. ಜತೆಗೆ ಧಾರ್ಮಿಕವಾಗಿ ಪ್ರಗಲ್ಭ ವಿದ್ವಾಂಸ,ವಿದ್ವಾಂಸೆಯರಿಂದ
ಶರೀಅತ್ ನ ಎರಡು ಸಬ್ಜೆಕ್ಟ್ ಕೂಡಾ ಕಲಿಯುವ ಭಾಗ್ಯ ಸಿಕ್ಕಿದ್ದು ಇದು ಇಂದಿನ ಆಧುನಿಕ ಯುಗದಲ್ಲಿ ದೀನೀ ಚೌಕಟ್ಟಿನಲ್ಲಿ ಸುಸಂಸ್ಕೃತ ಜೀವನವನ್ನು ರೂಪಿಸಿಕೊಳ್ಳಲು ನನ್ನ ಮಕ್ಕಳಿಗೆ ಒದಗಿ ಬಂದ ಮಹಾ ಸೌಭಾಗ್ಯವೇ ಸರಿ.
ನುರಿತ ಪ್ರಾಂಶುಪಾಲ ಪ್ರಾಂಶುಪಾಲೆ ಹಾಗೂ ಶಿಕ್ಷಕಿಯರ ತಂಡದಿಂದ ಗುಣಮಟ್ಟದ ಶಿಕ್ಷಣ ಇತರ ಸಂಸ್ಥೆಗಳಿಗೆ ಹೋಲಿಸಿದರೆ ಅಗತ್ಯಕ್ಕೆ ಅನಿವಾರ್ಯ ಎಂಬಂತೆ ಸ್ಪರ್ಧಾತ್ಮಕ ಫೀಸ್ ನಿಗದಿ ಪಡಿಸಿ ಮಕ್ಕಳ ಕಲಿಕೆಗೆ ವಿವಿಧ ವಿನೂತನ ಯೋಜನೆಗಳನ್ನು ರೂಪಿಸಿಕೊಂಡು ಪ್ರೋತ್ಸಾಹ ನೀಡುವ ಆಡಳಿತ ಸಮಿತಿಯ ಸಮೀಕರಣ ಸುರಕ್ಷಿತ ವಿದ್ಯಾ ತಾಣ ಪರಿಸರ ಪ್ರದೇಶಗಳಿಗೆ ರಿಯಾಯಿತಿ ದರದಲ್ಲಿ ಸಂಸ್ಥೆಯ ಬಸ್ ನಲ್ಲಿಯೇ ಪ್ರಯಾಣ ದೂರದ ಊರಿನ ಮಕ್ಕಳಿಗೆ ಸುಸಜ್ಜಿತ ಹಾಸ್ಟೆಲ್ ಜೀವನ ಶಿಕ್ಷಣದ ಜತೆಗೆ ಮಕ್ಕಳಿಗೆ
ಧಾರೆ ಎರೆದು ಕೊಡುವ ನೈತಿಕತೆಯ ಮೌಲ್ಯಾಧಾರಿತ ಗುಣ ನಮ್ಮ ಹೆಣ್ಣು ಮಕ್ಕಳಿಗೆ ಬದುಕು ರೂಪಿಸಿಕೊಡುತ್ತಿರುವ ಮರ್ಕಝ್ ನ ವಿಧಾನ ಅದಕ್ಕಿಂತಲೂ ಮಿಗಿಲಾಗಿ ನಮ್ಮ ಮಕ್ಕಳ ನಡವಳಿಕೆ ಬಗ್ಗೆ ಯಾವುದೇ ಚಿಂತೆ ವ್ಯತೆ ಇಲ್ಲದೇ
ಪೋಷಕರಾದ ನಮ್ಮ ಮನಸ್ಸಿಗಿರುವ ಸಮಾಧಾನ.
ನಿಜಕ್ಕೂ ಕುಂಬ್ರ ಮರ್ಕಝ್ ನಮಗೆ ತಾಯಿ ಸಮಾನ ಎಂದೆಂದಿಗೂ ತೀರಿಸಲಾರೆವು ನಾವು ಈ ವಿದ್ಯಾ ಸಂಸ್ಥೆಯ ಋಣ ಕಾರಣಾಂತರಗಳಿಂದ ಒಂದು ದಿನ ಗೈರು ಹಾಜರಿಯಾದರೂ ಕಾಲೇಜಿನಿಂದ ನಿಮ್ಮ ಮಗಳು ಇಂದು ಕ್ಲಾಸಿಗೆ ಬರಲಿಲ್ಲ ಎಂಬ ಕರೆ ಬಂದಾಗ ನಮ್ಮ ಮಕ್ಕಳ ಸುರಕ್ಷಿತತೆ ಮತ್ತು ಭವಿಷ್ಯದ ಬಗ್ಗೆ ಸಂಸ್ಥೆಗೆ ಇರುವ ಕಾಳಜಿಯ ಬಗ್ಗೆ ನಮಗೆ ಮನದಾಳದಿಂದ ಧನ್ಯತಾ ಭಾವ ಮೂಡಿ ಬರುತ್ತದೆ ಈಗ ಚಾಲ್ತಿಯಲ್ಲಿರುವ ಅಲ್ ಮಾಹಿರ ಬಿರುದು ನೀಡುವ ಶರೀಅತ್ ಕೋರ್ಸ್ ಪಿಯುಸಿಯಲ್ಲಿ ಕಲಾ, ವಾಣಿಜ್ಯ,ವಿಜ್ಞಾನ ಬಿ ಎ, ಬಿ ಕಾಂ ಜತೆಗೆ ಮುಂದಿನ ವರ್ಷ ಬಿಎಸ್ಸಿ ಕೂಡಾ ಪ್ರಾರಂಭಗೊಂಡು ಕುಂಬ್ರ ಮರ್ಕಝ್ ನಮ್ಮ ಹೆಣ್ಣು ಮಕ್ಕಳ ಭವ್ಯ ಭವಿಷ್ಯವನ್ನು ಬರೆಯಲಿ ಉತ್ತರೋತ್ತರ ಅಭಿವೃದ್ಧಿಯತ್ತ ಕುಂಬ್ರ ಮರ್ಕಝ್ ನ ಪಯಣ ಸಾಗಲಿ ಎಂಬ ಮನದಾಳದ ಹಾರೈಕೆ.