ಚಿಕ್ಕಬಳ್ಳಾಪುರ: ಆಕೆ ಮದುವೆಯಾದ ಮೊದಲ ರಾತ್ರಿಯಂದೇ ಪ್ರೀತಿಸಿದವನ ಜೊತೆ ಪರಾರಿ ಆಗಿದ್ದಳು. ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ 10 ವರ್ಷಗಳ ಕಾಲ ಸಂಸಾರ ಮಾಡಿದ್ದಳು. ಆದರೆ, ಅವನು ಸಹ 10 ತಿಂಗಳ ಹಿಂದೆ ಮೃತಪಟ್ಟಿದ್ದ. ಹೀಗಾಗಿ, ಆಕೆ ಮತ್ತೋರ್ವ ಯುವಕನ ಜೊತೆ ಸಂಸಾರ ಆರಂಭಿಸಿದ್ದಳು. ಅವನು ಕೂಡ ಒಂದು ವಾರದ ಹಿಂದೆ ಮೃತಪಟ್ಟಿದ್ದಾನೆ. ಆದರೆ, ವಿಧಿಯಾಟ ಅಷ್ಟಕ್ಕೇ ನಿಲ್ಲದ ತಾನು ಕೈ ಹಿಡಿದ ಇಬ್ಬರು ಪುರುಷರ ಬೆನ್ನಲ್ಲೇ ಆಕೆ ಕೂಡ ಸಾವನ್ನಪ್ಪಿದ್ದಾಳೆ. ಚಿಕ್ಕಬಳ್ಳಾಫುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಘಟನೆಯ ವಿವರ
ಪರ್ವೀನ್ ಮುಬಾರಕ್ ಎಂಬ 30 ವರ್ಷದ ಮಹಿಳೆಯೇ ಆ ನತದೃಷ್ಟ ಹೆಣ್ಣು. ಆಕೆಗೆ ಇನ್ನೂ 30 ವರ್ಷ ವಯಸ್ಸು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮುಸಲ್ಮಾನರಹಳ್ಳಿ ನಿವಾಸಿಯಾಗಿದ್ದ ಆಕೆಯ ಬಾಳಲ್ಲಿ ಯಾರೂ ಊಹಿಸದ ಘಟನೆಗಳು ನಡೆದು ಹೋಗಿವೆ. ಮೃತ ಪರ್ವೀನ್ ಮುಬಾರಕ್ಳನ್ನು, ಹತ್ತು ವರ್ಷಗಳ ಹಿಂದೆ ಬಾಗೇಪಲ್ಲಿ ಮೂಲದ ಯುವಕನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಫಸ್ಟ್ ನೈಟ್ನಲ್ಲೇ ಗಂಡನನ್ನು ಬಿಟ್ಟು ಶಿವಪ್ಪ ಎಂಬ ಪ್ರಿಯಕರನ ಜೊತೆ ಆಕೆ ಓಡಿ ಹೋಗಿದ್ದಳು. ಶಿವಪ್ಪನ ಜೊತೆ 10 ವರ್ಷ ಸಂಸಾರ ಮಾಡಿದ ನಂತರ ಆತ ಅನಾರೋಗ್ಯದಿಂದ ಮೃತಪಟ್ಟಿದ್ದ. ಶಿವಪ್ಪ ಹಾಗೂ ಪರ್ವೀನ್ಗೆ 8 ವರ್ಷದ ಓರ್ವ ಮಗನೂ ಇದ್ದಾನೆ. ಆದರೆ, ಇತ್ತೀಚೆಗೆ ಪರ್ವೀನ್ ಪಕ್ಕದ ಗ್ರಾಮ ವಾಟದ ಹೊಸಹಳ್ಳಿ ಗ್ರಾಮದ ವಿನಯ್ ಜೊತೆ ಸಂಸಾರ ಶುರು ಮಾಡಿದ್ದಳು. ಆತ ಕೂಡ ವಾರದ ಹಿಂದೆ ರಸ್ತೆ ಅಪಘಾತದಲ್ಲಿ ಲಾರಿ ಕೆಳಗೆ ಸಿಲುಕಿ ಮೃತಪಟ್ಟಿದ್ದಾನೆ.ಅದಾದ ಬಳಿಕ ಪರ್ವೀನ್ ಕೂಡ ವಾಟದಹೊಸಹಳ್ಳಿ ಗ್ರಾಮದ ಹೊರಹೊಲಯದ ಪಾಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಪರ್ವೀನ್ ವಾಸವಿದ್ದ ರೂಮ್ ಗೋಡೆಯ ಮೇಲೆ ಐ ಮಿಸ್ ಯು ವಿಜೆ ಎಂದು ಬರೆಯಲಾಗಿದೆ. ಪರ್ವೀನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳಾ, ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದಳಾ ಅಥವಾ ಬಾವಿಗೆ ಹಾರಲು ಹೋಗಿ ಕೊಂಬೆ ಮುರಿದು ಮೈ ಮೇಲೆ ಹಾಗೂ ಕತ್ತಿಗೆ ಗಾಯವಾಗಿದೆಯಾ, ಅಥವಾ ಆಕೆಯನ್ನು ಯಾರಾದರೂ ಕೊಲೆ ಮಾಡಿ ಬಾವಿಗೆ ಎಸೆದರಾ? ಎಂಬ ಕುರಿತು ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.