ಮೈಸೂರು: ಜಿಲ್ಲೆಯ ನಂಜನಗೂಡು ಹುಚ್ಚಗಣಿ ಮಹದೇವಮ್ಮ ದೇವಸ್ಥಾನ ತೆರವು ಪ್ರಕರಣಕ್ಕೆ ಸಂಬಂಧಿಸಿ ನಂಜನಗೂಡು ತಹಶೀಲ್ದಾರ್ ವರ್ಗಾವಣೆ ಮಾಡಲಾಗಿದೆ. ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿ ಕರ್ನಾಟಕದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.
ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷದ ಹಲವು ನಾಯಕರು ಕೂಡ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಿಧಾನಸೌಧದಲ್ಲಿ ಹೊಸ ನಿಯಮಾವಳಿ ರೂಪಿಸುವ ಬಗ್ಗೆಯೂ ಸರ್ಕಾರ ಪ್ರಸ್ತಾವಿಸಿತ್ತು. ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯ ಸರ್ಕಾರದ ನಿಯಮಾವಳಿಗಳಿಗೆ ಒಳಪಡುವ ಧಾರ್ಮಿಕ ಕೇಂದ್ರಗಳನ್ನು ಕೆಡಹಬಾರದು ಎಂದು ತಿಳಿಸುವ ಬಗ್ಗೆ ಯೋಜಿಸಲಾಗಿತ್ತು.
ಇದೀಗ, ರಾಜ್ಯದಲ್ಲಿ ವಿವಾದ ಸೃಷ್ಟಿಸಿದ್ದ ದೇಗುಲ ತೆರವು ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ತಹಶೀಲ್ದಾರ್ ತಲೆದಂಡವಾಗಿದೆ.ಮೈಸೂರು ಜಿಲ್ಲೆ ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ವರ್ಗಾವಣೆ ಮಾಡಿ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಐಎಂಎ ಸಕ್ಷಮ ಪ್ರಾಧಿಕಾರಕ್ಕೆ ವರ್ಗಾಯಿಸಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ರಶ್ಮಿ ಆದೇಶ ನೀಡಿದ್ದಾರೆ. ನಂಜನಗೂಡು ತಹಶೀಲ್ದಾರ್ ಹುದ್ದೆಯನ್ನು ಸರ್ಕಾರ ಖಾಲಿ ಉಳಿಸಿದೆ. ಸೂಕ್ತ ಪ್ರಭಾರ ವ್ಯವಸ್ಥೆ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ಗೆ ಸೂಚನೆ ನೀಡಲಾಗಿದೆ.