ಧಾರವಾಡ: ಬಾಲಿವುಡ್‍ನ ಹೈಪ್ರೊಫೈಲ್ ಕೇಸ್ ಪ್ರಸ್ತಾಪ ಆದಾಗೆಲ್ಲಾ ಅಲ್ಲಿ ಕೇಳಿ ಬರುವ ಸಾಮಾನ್ಯ ಹೆಸರೇ ಸತೀಶ್ ಮಾನೆಶಿಂಧೆ. ಸ್ಟಾರ್‍ಗಳನ್ನು ಕಾನೂನು ಚಕ್ರವ್ಯೂಹದಿಂತ ತಮ್ಮ ಬುದ್ಧಿವಂತಿಕೆ ಪ್ರಯೋಗಿಸಿ ಹೊರತರುವ ಧಾರವಾಡದ ಸತೀಶ್ ಮಾನಶಿಂಧೆ, ಇದೀಗ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ಶಾರೂಖ್ ಪುತ್ರ ಆರ್ಯನ್ ಪರ ವಾದ ಮಂಡಿಸುತ್ತಿದ್ದಾರೆ.
ಬಾಲಿವುಡ್ ನಟ ಶಾರೂಖ್ ಖಾನ್ ಮಗನ ಕೇಸ್ ನಡೆಸುತ್ತಿರುವ ವಕೀಲ ನಮ್ಮ ರಾಜ್ಯದವರೇ ಆಗಿದ್ದಾರೆ. ಧಾರವಾಡದ ಮೂಲದ ವಕೀಲ ಸತೀಶ್ ಮಾನಶಿಂಧೆ ಪ್ರಸಿದ್ಧ ವಕೀಲರಾಗಿದ್ದಾರೆ. 1965 ರಲ್ಲಿ ಹುಟ್ಟಿರುವ ಸತೀಶ್, ಧಾರವಾಡ ನಗರದ ವಿದ್ಯಾಗಿರಿ ನಿವಾಸಿ. ಧಾರವಾಡ ಕರ್ನಾಟಕ ವಿವಿಯ ಸಿದ್ದಪ್ಪ ಕಾನೂನು ಕಾಲೇಜ್‍ನಲ್ಲಿ ಎಲ್‍ಎಲ್‍ಬಿ ಮುಗಿಸಿದ್ದಾರೆ.
ಸತೀಶ್ ಮಾನಶಿಂಧೆ ಅವರು 1983ರಲ್ಲಿ ಮುಂಬೈಗೆ ಹೋಗಿ ವಾಸವಾಗಿದ್ದರು. ಅಲ್ಲಿ ಹಿರಿಯ ಪ್ರಸಿದ್ಧ ವಕೀಲರಾಗಿದ್ದ ರಾಮ್ ಜೆಠ್ಮಲಾನಿ ಕಡೆ ಜ್ಯೂನಿಯರ್ ವಕೀಲರಾಗಿ ಪ್ರ್ಯಾಕ್ಟಿಸ್ ಮಾಡುತ್ತಿದ್ದರು. ಬಾಲಿವುಡ್ ನಟ ಸಂಜಯ ದತ್‍ನ ಮುಂಬೈ ಬಾಂಬ್ ಬ್ಲಾಸ್ಟ್ ಕೇಸ್ ಬಳಿಕ ಸತೀಶ್ ಬೆಳಕಿಗೆ ಬಂದರು. ನಂತರ ಸಲ್ಮಾನ್ ಖಾನ್ ಕಾರು ಅಪಘಾತದ ಪ್ರಕರಣ ಹಿಡಿದಿದ್ದರು. ಬಾಳಾ ಠಾಕ್ರೆ ಕುಟುಂಬದ ಬಹುತೇಕ ಕೇಸ್ ನಡೆಸಿದ್ದಾರೆ. ಪ್ರತಿ ಮುದ್ದತಿಗೆ 10 ಲಕ್ಷ ಸಂಭಾವನೆ ಪಡೆಯುವ ಸತೀಶ್ ಮಾನಶಿಂಧೆ ಬಾಲಿವುಡ್ ಬಹುತೇಕ ಕೇಸ್‍ಗಳನ್ನು ನಡೆಸಿದ್ದಾರೆ.
ಈಗ ಮಹಾರಾಷ್ಟ್ರದಲ್ಲೇ ಸುಪ್ರಸಿದ್ದ ಕ್ರಿಮಿನಲ್ ಲಾಯರ್ ಆಗಿದ್ದಾರೆ. ಮುಂಬೈ ಎನ್ ಕೌಂಟರ್ ಸ್ಪೆಷಾಲಿಸ್ಟ್ ದಯಾ ನಾಯಕ್ ಕೇಸ್ ಕೂಡಾ ಸತೀಶ್ ನಡೆಸುತ್ತಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ನಂತರ ರಿಯಾ ಚಕ್ರವರ್ತಿ ಪರ ವಕಾಲತ್ತು ನಡೆಸಿದ್ದು, ಇದೇ ಸತೀಶ್ ಮಾನಶಿಂಧೆ ಆಗಿದ್ದಾರೆ. ಈಗ ಬಾಲಿವುಡ್‍ನಲ್ಲಿ ಸಂಚಲ ಮೂಡಿಸಿರುವ ಶಾರೂಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಕರಣವನ್ನು ಕೂಡಾ ಸತೀಶ್ ಮಾನಶಿಂಧೆಯೇ ನಡೆಸುತ್ತಿದ್ದಾರೆ.