ಅಲ್ ಅಮೆರತ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ‘ಬಿ’ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಒಮನ್ ವಿರುದ್ಧ ಸ್ಕಾಟ್ಲೆಂಡ್ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಸತತ ಮೂರನೇ ಗೆಲುವು ದಾಖಲಿಸಿರುವ ಸ್ಕಾಟ್ಲೆಂಡ್, ಗುಂಪಿನ ಅಗ್ರಸ್ಥಾನಿಯಾಗಿ ‘ಸೂಪರ್-12’ರ ಹಂತಕ್ಕೆ ಲಗ್ಗೆಯಟ್ಟಿದೆ. ಈ ಮೂಲಕ ಸೂಪರ್-12 ಹಂತದಲ್ಲಿ ಭಾರತ ಇರುವ ‘ಗ್ರೂಪ್ 2’ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಅತ್ತ ಸತತ ಎರಡನೇ ಸೋಲಿನ ಆಘಾತಕ್ಕೆ ಒಳಗಾಗಿರುವ ಒಮನ್ ಟೂರ್ನಿಯಿಂದಲೇ ನಿರ್ಗಮಿಸಿದೆ.
Scotland deliver a commanding performance to book their place in the Super 12 🔥#T20WorldCup | #OMNvSCO | https://t.co/G6nLQ2xnAO pic.twitter.com/W5VbODut9H
— T20 World Cup (@T20WorldCup) October 21, 2021
123 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ 17 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸ್ಕಾಟ್ಲೆಂಡ್ ಪರ ನಾಯಕ ಕೈಲ್ ಕೋಜರ್ (41), ಜಾರ್ಜ್ ಮುನ್ಸೆ (20), ಮ್ಯಾಥ್ಯೂ ಕ್ರಾಸ್ (26) ಹಾಗೂ ರಿಚರ್ಡ್ ಬ್ಯಾರಿಂಗ್ಟನ್ (31) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಈ ಮೊದಲು ಸ್ಕಾಟ್ಲೆಂಡ್ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿದ ಒಮನ್ 20 ಓವರ್‌ಗಳಲ್ಲಿ 122 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.