ನವದೆಹಲಿ: ಭಾರತದಲ್ಲಿ 100 ಕೋಟಿ ಲಸಿಕೆ ಕೇವಲ ಅಂಕಿಯಲ್ಲ. ಇದೊಂದು ಇತಿಹಾಸ ಪುಟದಲ್ಲಿ ದಾಖಲಾದ ಹೊಸ ಅಧ್ಯಾಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
100 ಕೋಟಿ ಲಸಿಕೆ ವಿತರಿಸಿ ಐತಿಹಾಸಿಕಾ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಇಷ್ಟೊಂದು ಲಸಿಕೆ ಖರೀದಿಸಲು ಎಲ್ಲಿಂದ ದುಡ್ಡು ತರುತ್ತೆ ಎಂಬ ಚರ್ಚೆಯಿತ್ತು. ಇಷ್ಟು ಜನಕ್ಕೆ ಭಾರತ ಲಸಿಕೆ ಕೊಡುತ್ತಾ ಎಂಬ ಚರ್ಚೆ ಕೂಡ ಇತ್ತು. ಆದರೆ ಈಗ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ ಎಂದರು.
ನಾವು ಅಸಾಧಾರಣ ಗುರಿ ತಲುಪಿದ್ದೇವೆ. ಇದು ಭಾರತದ ಪ್ರತಿಯೊಬ್ಬ ನಾಗರಿಕನ ಸಾಧನೆ. ಕೆಲವರು ಭಾರತವನ್ನು ಬೇರೆ ರಾಷ್ಟ್ರದೊಂದಿಗೆ ಹೋಲಿಸುತ್ತಿದ್ದಾರೆ. ನಾವು ಯಾವಾಗ ಲಸಿಕೆ ಆರಂಭಿಸಿದ್ದೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು.
ಈ ದೀಪಾವಳಿಯಲ್ಲಿ 100 ಕೋಟಿ ಲಸಿಕೆ ವಿತರಣೆಯ ಸಂಭ್ರಮ ಇದೆ. ಭಾರತದಲ್ಲಿಯೇ ಉತ್ಪಾದಿಸಿದ ವಸ್ತು ಖರೀದಿಸಿ ಹಬ್ಬವನ್ನು ವಿಶೇಷಗೊಳಿಸಿ. ಈ ಸಫಲತೆ ನಮಗೆ ಹೊಸ ವಿಶ್ವಾಸ ಮೂಡಿಸಿದೆ. ಕೋವಿಡ್ ಲಸಿಕೆಯಿಂದ ದೇಶದ ಸುರಕ್ಷತವಾಗಿದೆ. ನಮ್ಮ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸೋಣ ಎಂದರು.
ಲಸಿಕೆ ಹಾಕಿಸಿಕೊಳ್ಳಲು ಜನ ಬರುವುದಿಲ್ಲ ಎಂಬ ಮಾತು ಇತ್ತು. ಆದರೆ 100 ಕೋಟಿ ಲಸಿಕೆ ವಿತರಿಸುವ ಮೂಲಕ ಜನ ಉತ್ತರ ನೀಡಿದ್ದಾರೆ. ಜನರ ಸಹಭಾಗಿತ್ವದಲ್ಲಿ ಮೊದಲ ಯಶಸ್ಸು ಸಿಕ್ಕಿದೆ. ದೀಪ ಬೆಳಗುವುದರಿಂದ ಘಂಟೆ ಬಾರಿಸುವುದರಿಂದ ಕೊರೊನಾ ಹೋಗುತ್ತದೆಯೇ ಎಂದು ಪ್ರಶ್ನಿಸಿದ್ದರು. ಆದರೆ ಇದು ಜನ ಜಾಗೃತಿ ಮೂಡಿಸಿತು. ತಂತ್ರಜ್ಞಾನದ ಅದ್ಭುತ ಬಳಕೆ ಆಗಿದೆ. ದೇಶ 100 ಕೋಟಿ ಲಸಿಕೆ ವಿರಣೆಗೆ ಗರ್ವ ಪಡುತ್ತಿದೆ ಎಂದರು.