ಮಲಪ್ಪುರಂ, ಅ.27: 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿರುವ ಘಟನೆ ಕೇರಳದ ಕೊಂಡೊಟ್ಟಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ 10ನೇ ತರಗತಿಯಲ್ಲಿ ಓದುತ್ತಿದ್ದ 15 ವರ್ಷದ ಬಾಲಕನನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ವಿದ್ಯಾರ್ಥಿಯನ್ನು ಬಂಧಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಲಪ್ಪುರಂ ಎಸ್ಪಿ ಸುಜಿತ್ ದಾಸ್, ಹುಡುಗನಿಗೆ ಯಾವುದೇ ಅಪರಾಧದ ಹಿನ್ನೆಲೆಯಿಲ್ಲ. ಸಂತ್ರಸ್ತೆಯ ಪ್ರಕಾರ ಈ ಹಿಂದೆ ಎಂದಿಗೂ ತೊಂದರೆ ನೀಡಿಲ್ಲ. ಆದರೆ, ಇದೀಗ ಯುವತಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿರುವುದು ಖಚಿತವಾಗಿದೆ ಎಂದು ಅವರು ತಿಳಿಸಿದ್ದಾರೆ.
ತನ್ನ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಬಾಲಕನಿಂದ ಆ ಯುವತಿ ತಪ್ಪಿಸಿಕೊಂಡಿದ್ದು, ಅಲ್ಲಿಂದ ಓಡಿ ಹೋಗಿದ್ದಾಳೆ. 15 ವರ್ಷದ ಬಾಲಕನಿಂದ ಈ ಕೃತ್ಯ ನಡೆದಿದ್ದು ಯತ್ನ ವಿಫಲವಾಗಿದ್ದಕ್ಕೆ ಅಪ್ರಾಪ್ತ ಆರೋಪಿ ಯುವತಿ ಮುಖಕ್ಕೆ ಕಲ್ಲಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ.ಇದಾದ ಕೂಡಲೆ ಘಟನೆ ನಡೆದ ಸ್ಥಳದಿಂದ ಆ ಹುಡುಗ ಕೂಡ ಪರಾರಿಯಾಗಿದ್ದಾನೆ.
ಆಕೆ ಈ ವಿಚಾರವನ್ನು ಬೇರೆ ಯಾರ ಬಳಿ ಹೇಳಬಹುದು ಎಂಬ ಭೀತಿಯಿಂದ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆತ ಮನೆಗೆ ಹೋದಾಗ ಆತನ ಕೊಳಕಾದ ಬಟ್ಟೆ, ಮೈಮೇಲಿನ ಪರಚಿದ ಗಾಯ, ರಕ್ತ ಒಸರುತ್ತಿದ್ದ ತುಟಿಯನ್ನು ನೋಡಿ ಮನೆಯವರು ಏನಾಯಿತೆಂದು ಗಾಬರಿಯಾಗಿದ್ದಾರೆ. ಆಗ ನಾಯಿ ಅಟ್ಟಿಸಿಕೊಂಡು ಬಂದ ಕಾರಣ ಕೆಳಗೆ ಬಿದ್ದು ಗಾಯ ಮಾಡಿಕೊಂಡೆ ಎಂದು ಆತ ಸುಳ್ಳು ಹೇಳಿದ್ದಾನೆ.ಆದರೆ, ಯುವತಿ ನೀಡಿದ ಮಾಹಿತಿ ಮೇರೆಗೆ ಆತನ ಮನೆಗೆ ಹೋದ ಪೊಲೀಸರು ವಿಚಾರಣೆ ನಡೆಸಿದಾಗ, 21 ವರ್ಷದ ಯುವತಿಯ ಮೇಲೆ ಲೈಂಗಿಕ ದಾಳಿ ನಡೆಸಿದಾಗ ತನಗೆ ಗಾಯಗಳಾಗಿವೆ ಎಂದು ಒಪ್ಪಿಕೊಂಡಿದ್ದಾನೆ.