dtvkannada

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಪಾಕಿಸ್ತಾನ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಸತತ ಮೂರನೇ ಗೆಲುವು ದಾಖಲಿಸಿರುವ ಪಾಕಿಸ್ತಾನ, ಒಟ್ಟು ಆರು ಅಂಕಗಳೊಂದಿಗೆ ಗ್ರೂಪ್ 2ರಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಅತ್ತ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಅಫ್ಗಾನಿಸ್ತಾನಕ್ಕೆ ಪಾಕ್ ಸವಾಲನ್ನು ಮೆಟ್ಟಿ ನಿಲ್ಲಲ್ಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಗಾನಿಸ್ತಾನ ಆರು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಬಳಿಕ ಪಾಕಿಸ್ತಾನದ ನಾಯಕ ಬಾಬರ್ ಆಜಂ (51) ಹಾಗೂ ಕೊನೆಯ ಹಂತದಲ್ಲಿ ಆಸಿಫ್ ಅಲಿ (25*) ಅಮೋಘ ಆಟದ ನೆರವಿನಿಂದ ಇನ್ನೊಂದು ಓವರ್ ಬಾಕಿ ಉಳಿದಿರುವಂತೆಯೇ ಗೆಲುವು ದಾಖಲಿಸಿತು.

 https://twitter.com/T20WorldCup/status/1454141539039383553?

ಸವಾಲಿನ ಮೊತ್ತ ಬೆನ್ನತ್ತಿದ ಪಾಕ್ ಆರಂಭ ಉತ್ತಮವಾಗಿರಲಿಲ್ಲ. ಮೊಹಮ್ಮದ್ ರಿಜ್ವಾನ್ (8) ಬೇಗನೇ ಮರಳಿದರು. ನಾಯಕ ಬಾಬರ್ ಆಜಂ ಹಾಗೂ ಫಖರ್ ಜಮಾನ್ (30) ಎರಡನೇ ವಿಕೆಟ್‌ಗೆ 63 ರನ್‌ಗಳ ಜೊತೆಯಾಟ ಕಟ್ಟಿದರು. ರಶೀದ್ ಖಾನ್ ಬಲೆಗೆ ಮೊಹಮ್ಮದ್ ಹಫೀಜ್ (10) ಬಿದ್ದರು. ಇದರಿಂದ ಪಂದ್ಯ ರೋಚಕ ಹಂತವನ್ನು ತಲುಪಿತು. ಅಂತಿಮ 30 ಎಸೆತಗಳಲ್ಲಿ ಗೆಲುವಿಗೆ 47 ರನ್‌ಗಳ ಅಗತ್ಯವಿತ್ತು. ಅತ್ತ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಬಾಬರ್ ಆಕರ್ಷಕ ಅರ್ಧಶತಕ ಗಳಿಸಿದರು. ಆದರೆ ಬಾಬರ್ ಜೊತೆಗೆ ಶೋಯಬ್ ಮಲಿಕ್ (19) ವಿಕೆಟ್ ಪತನದೊಂದಿಗೆ ಪಂದ್ಯ ರೋಚಕ ಹಂತವನ್ನು ತಲುಪಿತು. 47 ಎಸೆತಗಳನ್ನು ಎದುರಿಸಿದ ಬಾಬರ್ ನಾಲ್ಕು ಬೌಂಡರಿ ನೆರವಿನಿಂದ 51 ರನ್ ಗಳಿಸಿದರು.

ಅಂತಿಮ ಎರಡು ಓವರ್‌ನಲ್ಲಿ ಪಾಕ್ ಗೆಲುವಿಗೆ 24 ರನ್‌ಗಳ ಅವಶ್ಯಕತೆಯಿತ್ತು. ಆದರೆ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಆಸಿಫ್ ಅಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 19 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಏಳು ಎಸೆತ ಎದುರಿಸಿದ ಆಸಿಫ್ ನಾಲ್ಕು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿ ಔಟಾಗದೆ ಉಳಿದರು. ಅಫ್ಗರ್ ಪರ ರಶೀದ್ ಖಾನ್ ಎರಡು ವಿಕೆಟ್ ಗಳಿಸಿದರು.ಈ ಮೊದಲು ಅಫ್ಗಾನಿಸ್ತಾನ ಆರಂಭ ಉತ್ತಮವಾಗಿರಲಿಲ್ಲ. 76 ರನ್ ಗಳಿಸುವುದರೊಳಗೆ ಆರು ವಿಕೆಟ್ ನಷ್ಟವಾಗಿತ್ತು. ಹಜರತ್ ಉಲ್ಲ ಜಜಾಯ್ (0), ಮೊಹಮ್ಮದ್ ಶಹಜಾದ್ (8), ರಹಮಾನ್ ಉಲ್ಲ ಗುರ್ಬಜ್ (10), ಅಸ್ಗರ್ ಅಫ್ಗನ್ (10), ಕರೀಂ ಜನ್ನತ್ (15) ಹಾಗೂ ನಜೀಬುಲ್ಲ ಜದ್ರಾನ್ (22) ಪ್ರಭಾವಿ ಎನಿಸಿಕೊಳ್ಳಲಿಲ್ಲ. ಆದರೆ ಮುರಿಯದ ಏಳು ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿದ ನಾಯಕ ಮೊಹಮ್ಮದ್ ನಬಿ ಹಾಗೂ ಗುಲ್ಬದಿನ್ ನಯೀಬ್‌ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ನಬಿ ಹಾಗೂ ಗುಲ್ಬದಿನ್ ತಲಾ 35 ರನ್ ಗಳಿಸಿ ಔಟಾಗದೆ ಉಳಿದರು. 35 ಎಸೆತಗಳನ್ನು ಎದುರಿಸಿದ ನಬಿ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಸೇರಿದ್ದವು. ಅತ್ತ ಗುಲ್ಬದಿನ್ 25 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು.

By dtv

Leave a Reply

Your email address will not be published. Required fields are marked *

error: Content is protected !!