ಚೆನ್ನೈ: ತಿರುವಿನಲ್ಲಿ ಕಾಂಕ್ರೆಟ್ ಲಾರಿ ಪಲ್ಚಿಯಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ದಂಪತಿಗಳು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ.ಕೇವಲ 4 ದಿನಗಳ ಹಿಂದೆ ಮದುವೆಯಾಗಿದ್ದ ಕೇರಳ ಮೂಲದ ಮನೋಜ್ ಕುಮಾರ್ (31) ಮತ್ತು ಪೆರುಗಲಥೂರ್ ಮೂಲದ ಕಾರ್ತಿಕಾ (30) ಮೃತ ದಂಪತಿಗಳು.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಕಾಂಕ್ರೀಟ್ ಮಿಕ್ಸರ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ ಆ ಗಂಡ-ಹೆಂಡತಿ ಸಂಚರಿಸುತ್ತಿದ್ದ ಕಾರು ಅಪ್ಪಚ್ಚಿಯಾಗಿದೆ.ಮನೋಜ್ ಕುಮಾರ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಹೆಂಡತಿ ಕಾರ್ತಿಕಾ ಖಾಸಗಿ ಕ್ಲಿನಿಕ್ನಲ್ಲಿ ವೈದ್ಯೆಯಾಗಿದ್ದರು. ನಾಲ್ಕು ದಿನಗಳ ಹಿಂದೆ ಅಕ್ಟೋಬರ್ 28ರಂದು ಇವರಿಬ್ಬರೂ ಮದುವೆಯಾಗಿದ್ದರು.
ಭಾನುವಾರ ಈ ದಂಪತಿಗಳು ಕಾರ್ತಿಕಾಳ ಮನೆಗೆ ಹೋಗಿದ್ದರು. ನಂತರ ಕಾರಿನಲ್ಲಿ ಅರಕ್ಕೋಣಂಗೆ ಹಿಂತಿರುಗುತ್ತಿದ್ದರು. ರಾತ್ರಿ 9.45ರ ವೇಳೆಗೆ ಕದಂಬತ್ತೂರು ಬಳಿ ಪೂನಮಲ್ಲಿ-ಅರಕ್ಕೋಣಂ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಹೋಗುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಟ್ರಕ್ನ ಚಾಲಕ ತಿರುವಿನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮನೋಜ್ ಅವರ ಕಾರಿನ ಮೇಲೆ ಬಿದ್ದಿದೆ.ಘಟನೆಯಿಂದ ಕಾರು ಅಪ್ಪಚ್ಚಿಯಾಗಿದೆ. ನಂತರ ಎರಡು ಗಂಟೆಗಳ ಕಾಳ ಕಾರ್ಯಾಚರಣೆ ನಡೆಸಿ ಟ್ರಕ್ ಅನ್ನು ಮೇಲೆತ್ತಲಾಯಿತು. ಅಷ್ಟರಲ್ಲಿ ಕಾರಿನಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದರು. ಮಪ್ಪೆಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಟ್ರಕ್ನ ಚಾಲಕ ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.