ವಿಟ್ಲ: ಸಾಲೆತ್ತೂರು ಎಂಬಲ್ಲಿ ಮುಸ್ಲಿಂ ಧರ್ಮದ ಮದುವೆ ಮನೆಯಲ್ಲಿ ಸ್ವಾಮೀ ಕೊರಗಜ್ಜನ ವೇಷವನ್ನು ಮದುಮಗನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದ್ದ ಮಂಗಲ್ಪಡಿ ನಿವಾಸಿ, ಪುತ್ತೂರು ಫಾತಿಮಾ ಅಂಗಡಿಯ ಮಾಲಕ ಅಹ್ಮದ್ ಮುಜಿತಾಬು(29) ಮತ್ತು ಬಾಯಾರು ಪದವು ನಿವಾಸಿ ಮೊಯ್ದೀನ್ ಮುನಿಶ್ (20) ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.
ಆರೋಪಿಗಳನ್ನು ಬಂಧಿಸದಿದ್ದಲ್ಲಿ ವಿಟ್ಲ ಬಂದಿಗೆ ಹಿಂ.ಜಾ.ವೇ ಕರೆ ನೀಡಿತ್ತು. ಆದರೆ ಈಗ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಲ್ ಅಗರ್ತಿಮೂಲೆ ಸಮೀಪದ ಉಮರುಲ್ ಭಾಷಿತ್ ಎಂಬಾತನ ಜೊತೆ ಜ.೬ರಂದು ನಡೆದಿತ್ತು. ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಔತಣಕೂಟ(ತಾಳ)ಕ್ಕೆ ಆಗಮಿಸಿದ್ದರು. ರಾತ್ರಿ ವೇಳೆ ಆಗಮಿಸಿದ ವರನ ಬಳಗದವರು ವಧುವಿನ ಮನೆ ಪಕ್ಕದ ರಸ್ತೆಯಲ್ಲಿ ವರನಿಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮೆರವಣಿಗೆಯಲ್ಲಿ ಹಾಡು ಹಾಡುತ್ತಾ ಕರೆತಂದಿದ್ದರು. ಬಳಿಕ ಮದುಮಗನಿಗೆ ಬಣ್ಣ ಹಚ್ಚಿ ಕೊರಗಜ್ಜನನ್ನು ಹೋಲುವ ವೇಶ ದರಿಸಿ ಕುಣಿಸಿದ್ದರು. ಆ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿ ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು.
ಬಳಿಕದ ಬೆಳವಣಿಗೆಯಲ್ಲಿ ಕಡಂಬು ನಿವಾಸಿ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಚೇತನ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವರ ಉಮರುಲ್ ಭಾಷಿತ್ ಮತ್ತು ಇತರ ಹಲವರ ವಿರುದ್ಧ ಕಲಂ 153ಎ,295 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ರವರು ತನಿಖೆಗಾಗಿ ಠಾಣಾ ಎಸ್.ಐ.ಗಳಾದ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಸಂಜೀವ ಪುರುಷರವರ ನೇತೃತ್ವದಲ್ಲಿ ಎರಡು ವಿಶೇಷ ತಂಡವನ್ನು ರಚಿಸಿ ತನಿಖೆ
ಆರಂಬಿಸಿದ್ದು, ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.