ಪುತ್ತೂರು: ಬಾಡಿಗೆ ಸರಿಯಾಗಿ ನೀಡದ ಅಂಗಡಿಯ ಕೋಣೆಗೆ ಮಾಲಕ ಬೀಗ ಜಡಿದ ಘಟನೆ ಗುರುವಾರ ರಾತ್ರಿ ಕುಂಬ್ರದಲ್ಲಿ ನಡೆದಿದೆ. ಕುಂಬ್ರ ಪೇಟೆಯಲ್ಲಿರುವ ಒಳಮೊಗ್ರು ಗ್ರಾಮ ಪಂಚಾಯತಿಗೆ ಸೇರಿದ ಎರಡು ಅಂಗಡಿ ಕೋಣೆಗೆ ಬೀಗ ಜಡಿಯಾಲಾಗಿದೆ. ಅಂಗಡಿ ಕೋಣೆಯನ್ನು ಬಾಡಿಗೆ ನೀಡಿದ್ದ ಕುಂಬ್ರದ ಸಲಾಮುದ್ದೀನ್ ಎಂಬವರು ಬಾಡಿಗೆ ಬಾಕಿ ಇರುವ ಕಾರಣಕ್ಕೆ ಕೋಣೆಗೆ ಬೀಗ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕುಂಬ್ರದಲ್ಲಿರುವ ಪಂಚಾಯಿತಿ ಕಟ್ಟಡದಲ್ಲಿ ಬೇಕರಿ ವ್ಯವಹಾರ ಮಾಡುತ್ತಿದ್ದ ಅಂಗಡಿ ಮತ್ತು ಹೊಟೇಲ್ ವ್ಯವಹಾರ ನಡೆಸುತ್ತಿದ್ದ ಎರಡೂ ಕೋಣೆಗಳಿಗೆ ಬೀಗ ಜಡಿಯಲಾಗಿದೆ. ಇವರಿಬ್ಬರಿಂದ ಒಟ್ಟು ೨ ಲಕ್ಷದ ೮೦ ಸಾವಿರ ಬಾಡಿಗೆ ಮೊತ್ತವನ್ನು ಪಂಚಾಯಿತಿಗೆ ಬಾಕಿ ಇದೆ. ಎರಡೂ ಕೋಣೆಯು ಸಲಾಮುದ್ದೀನ್ ಅವರ ಹೆಸರಿನಲ್ಲಿದ್ದು ಬೇಕರಿ ಮತ್ತು ಹೊಟೇಲ್‌ಗೆ ಬಾಡಿಗೆ ನೀಡಿದ್ದಾರೆ.
ಇಬ್ಬರೂ ಬಾಡಿಗೆ ಪಾವತಿಸದ ಕಾರಣ ಗ್ರಾಪಂನಿಂದ ಸಲಾಮುದ್ದೀನ್ ಅವರಿಗೆ ಬಾಡಿಗೆ ಪಾವತಿ ಮಾಡುವಂತೆ ಮೂರು ನೊಟೀಸ್ ಜಾರಿ ಮಾಡಲಾಗಿತ್ತು. ಮೂರನೇ ನೊಟೀಸ್‌ನಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ ಬಳಿಕ ಸಲಾಮುದ್ದೀನ್ ಕೋಣೆಗೆ ಬೀಗ ಜಡಿದಿದ್ದರು. ಹೊಟೇಲ್ ವ್ಯವಹಾರ ನಡೆಸುತ್ತಿದ್ದ ಕೋಣೆಯ ಮಾಲಕರಾದ ಅಬ್ದುಲ್‌ರಹಿಮಾನ್ ಹಾಜಿ ಉಜಿರೋಡಿಯವರು ಸ್ವಲ್ಪ ಮೊತ್ತವನ್ನು ಪಾವತಿಸಿದ ಕಾರಣ ಅವರ ಹೊಟೇಲ್ ಬೀಗವನ್ನು ದಿನಾಂಕದ ಗಡುವು ವಿಧಿಸಿ ತೆರವು ಮಾಡಲಾಗಿದೆ.
ಬೇಕರಿಯ ಮಾಲಕರ ಮೊತ್ತ ಬಾಕಿ ಇರುವ ಕಾರಣ ಬೀಗ ತೆರವು ಮಾಡಿಲ್ಲ ಎಂದು ಸಲಾಮುದ್ದೀನ್ ತಿಳಿಸಿದ್ದಾರೆ. ಅಂಗಡಿ ಕೋಣೆಯಲ್ಲಿ ವ್ಯವಹಾರ ಮಾಡುತ್ತಿದ್ದವರು ಸರಿಯಾಗಿ ಪಂಚಾಯಿತಿಗೆ ಬಾಡಿಗೆ ಪಾವತಿಸದ ಕಾರಣ ನನ್ನ ವಿರುದ್ದ ಕಾನೂನು ಕ್ರಮಕೈಗೊಳ್ಳುವ ನೊಟೀಸ್ ಕಳುಹಿಸಿದ್ದು ಈ ಕಾರಣಕ್ಕೆ ಬೀಗ ಹಾಕಿದ್ದೇನೆ. ಬಾಕಿ ಬಾಡಿಗೆಯನ್ನು ಪಾವತಿಸಿದರೆ ಬೀಗ ತೆರವು ಮಾಡಲಾಗುತ್ತದೆ ಎಂದು ಸಲಾಮುದ್ದೀನ್ ತಿಳಿಸಿದ್ದಾರೆ.