ಮಂಗಳೂರು: ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ 25,49,079ರೂ.ಗಳನ್ನು ವಂಚನೆಗೈದ ಆರೋಪದ ಮೇರೆಗೆ ತಂಡವೊಂದರ ವಿರುದ್ಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವ್ಯಕ್ತಿಯೊಬ್ಬರು ಸೈನ್.ಕಾಮ್ ವೆಬ್‌ಸೈಟ್ ನಲ್ಲಿ ನೌಕರಿಯ ಬಗ್ಗೆ 2021ರ ಎಪ್ರಿಲ್ 6ರಂದು ಹೇಳಿಕೊಂಡಿದ್ದರು.
ಆ ಬಳಿಕ ಅಂಕುರ್ ದೇಸಾಯಿ ಎಂಬಾತ ಕರೆ ಮಾಡಿ ಸೆಕ್ಯುರ್ ಕ್ಯಾರಿಯರ್.ಕಾಮ್ ವೆಬ್‌ನಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ನೀಡಿ ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದ. ಅದರಂತೆ ನಗರದ ವ್ಯಕ್ತಿಯು 2,358ರೂ. ಪಾವತಿಸಿ ನೋಂದಾಯಿಸಿಕೊಂಡಿದ್ದರು.
ಬಳಿಕ ಆರೋಪಿಗಳಾದ ಅನಾಮಿಕಾ ಶರ್ಮಾ, ಅನುರಾಧಾ, ಸೋನಿಯಾ, ಪ್ರಿಯಾಂಕ ರೆಡ್ಡಿ, ರಾಜೀವ, ಪೂಜಾ, ಲಕ್ಮೀ, ಪಲ್ಲವಿ ಎಂಬವರು ನಾನಾ ಉದ್ಯೋಗ ಖಾಲಿ ಇರುವ ಕಂಪನಿಗಳ ವಿವರ ನೀಡಿದ್ದರು. ಅಲ್ಲದೆ ದಾಖಲಾತಿ ಪರಿಶೀಲನೆಗಾಗಿ ಸಂಸ್ಕರಣಾ ಶುಲ್ಕ ಪಾವತಿಸುವಂತೆ ಸೂಚಿಸಿದ್ದರು.
ಈ ವಂಚನಾ ತಂಡದ ಕೋರಿಕೆಯಂತೆ ನಗರದ ವ್ಯಕ್ತಿಯು 4,130ರೂ.ಗಳನ್ನು ತನ್ನ ಐಸಿಐಸಿಐ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದರು.
ಬಳಿಕ ಹಂತ ಹಂತವಾಗಿ 10,65,065ರೂ. ಹಣವನ್ನು ಯುಪಿಐ ವರ್ಗಾವಣೆ ಮಾಡಿದ್ದರು. ಇನ್ನೂ ಹೆಚ್ಚಿನ ಹಣವನ್ನು ಪಾವತಿಸಿವರೆ ಈಗಾಗಲೆ ಪಾವತಿಸಿದ ಹಣವನ್ನು ಮರುಪಾವತಿ ನೀಡಲಾಗುವುದು ಎಂದು ನಂಬಿಸಿದ ತಂಡವು ನಗರದ ವ್ಯಕ್ತಿಯ ಎಸ್‌ಬಿಐ ಸುರತ್ಕಲ್ ಶಾಖೆಯಿಂದ ಹಂತ ಹಂತವಾಗಿ 25,49,079ರೂ.ಗಳನ್ನು ವರ್ಗಾವಣೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.