ತುಮಕೂರು: ಮಹೀಂದ್ರಾ ಶೋ ರೂಂನಲ್ಲಿ ರೈತನಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹೊಸ ಬೆಳವಣಿಗೆಯೊಂದು ನಡೆದಿದೆ. ಇದೀಗ ರೈತನ ಮನೆಗೆ ಮಹೀಂದ್ರ ಗೂಡ್ಸ್ ವಾಹನ ಆಗಮಿಸಿದೆ. ಶುಕ್ರವಾರ (ಜನವರಿ 28) ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಅಷ್ಟೇ ಅಲ್ಲದೆ, ಈ ಕುರಿತು ಸ್ವತಃ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ. ರೈತ ಕೆಂಪೇಗೌಡರಿಂದ ಮಹಿಂದ್ರ ಗೂಡ್ಸ್ ವಾಹನ ಖರೀದಿ ಮಾಡಲಾಗಿದೆ. ಈ ಬಗ್ಗೆ ರೈತ ಕೆಂಪೇಗೌಡರ ಸಂತಸ ಹಂಚಿಕೊಂಡಿದ್ದಾರೆ.

9.40 ಲಕ್ಷ ರೂಪಾಯಿಗೆ ಕೆಂಪೇಗೌಡ ವಾಹನ ಖರೀದಿಸಿದ್ದಾರೆ. 2 ಲಕ್ಷ ಮುಂಗಡ ಹಣ ಪಾವತಿಸಿ ಕೆಂಪೇಗೌಡ ವಾಹನ ಖರೀದಿ ಮಾಡಿದ್ದಾರೆ. ಉಳಿದ ಹಣ ಲೋನ್ ಮೂಲಕ ಪಾವತಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಕಾರು ಖರೀದಿಗೆ ಬಂದ ಯುವ ರೈತರಿಗೆ ಅವಮಾನ ಮಾಡಿದ ಘಟನೆ ತುಮಕೂರಿನ ರಾಮನಪಾಳ್ಯದಲ್ಲಿ ನಡೆದಿತ್ತು. ಬೊಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ತಾಲೂಕಿನ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡಗೆ ಅವಮಾನ ಮಾಡಲಾಗಿತ್ತು. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದಾರೆ ಎಂದು ತಿಳಿದುಬಂದಿತ್ತು.
ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್ರಿಂದ ಕೆಂಪೇಗೌಡಗೆ ಅವಮಾನ ಆಗಿತ್ತು. ಅವಮಾನಿಸಿದ್ದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು.
https://twitter.com/anandmahindra/status/1487081358958772228?
ನಮ್ಮನ್ನು ನೋಡಿ ಕೇವಲವಾಗಿ ಮಾತನಾಡಿದರು. 10 ರೂಪಾಯಿ ತರಲು ಯೋಗ್ಯತೆ ಇಲ್ಲ ಎಂದು ಅವಮಾನಿಸಿದರು. ಆಗ ನಾವು ಅರ್ಧಗಂಟೆಯಲ್ಲಿ 10 ಲಕ್ಷ ಹೊಂದಿಸಿ ತಂದು ಕೊಟ್ಟಿದ್ದೀವಿ. ಕಳೆದ ಜನವರಿ 4 ರಂದು ಶೋರೂಮ್ಗೆ ಹೋಗಿ ಗೂಡ್ಸ್ ವಾಹನ ತರಲು ಹೇಳಿಬರಲಾಗಿತ್ತು. ಅದರಂತೆ ಮೊನ್ನೆ ಎರಡು ಲಕ್ಷ ಹಣ ಕಟ್ಟಿ ವಾಹನ ತರಲು ಶೋರೂಮ್ಗೆ ಹೋಗಿದ್ವಿ. ಎರಡು ಲಕ್ಷ ಹಣ ಕಟ್ತೀವಿ. ವಾಹನ ಕೊಡಿ ಎಂದು ಕೇಳಿದ್ದೀವಿ. ಆಗ ಶೋರೂಮ್ ಸಿಬ್ಬಂದಿ ಏಳು ಜನರು ಕೂಡ ‘ನೀವು ತಮಾಷೆ ಮಾಡಲು ಬಂದಿದ್ದೀರಾ. ವಾಹನ ತಗೊಂಡು ಹೋಗೊದಕ್ಕೆ ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ, ಸುಮ್ಮನೇ ಬಂದಿದ್ದೀರಾ’ ಎಂದು ಅವಮಾನ ಮಾಡಿದ್ದರು ಎಂದು ಹೇಳಲಾಗಿತ್ತು.