ಉಡುಪಿ: ರಾಜ್ಯದೆಲ್ಲೆಡೆ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಾರಕಕ್ಕೇರಿರುವ ನಡುವೆಯೇ, ಹಿಜಾಬ್ ವಿರುದ್ಧ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ನೀಡಿರುವ ಹೇಳಿಕೆ ಹಿಜಾಬ್ ವಿರುದ್ಧ ಹೋರಾಡುತ್ತಿರುವ ಕೇಸರಿಪಾಳಯಕ್ಕೆ ಆಹಾರ ಒದಗಿಸಿದಂತಾಗಿದೆ.

ಕಾಂಗ್ರೆಸ್ನ ಸಿದ್ದರಾಮಯ್ಯ, ರಾಹುಲ್ ಗಾಂದಿ ಸೇರಿದಂತೆ ರಾಜ್ಯ, ರಾಷ್ಟ್ರ ನಾಯಕರು, ಹಿಜಾಬ್ ಸಾಂವಿಧಾನಿಕ ಹಕ್ಕು ಎಂದು ಹಿಜಾಬ್ ಪರವಹಿಸಿ ಮಾತಾಡುತ್ತಿರುವಾಗಲೇ, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ಹಿಜಾಬ್ ಸಮಾನತೆ ಅಲ್ಲ, ಹಿಜಾನ್ ಧರಿಸಲೇಬೇಕಾದರೆ ನೀವು ಬೇರೆ ಕಾಲೇಜ್ಗೆ ಹೋಗಿ ಎಂದು ಹೇಳಿಕೆ ನೀಡಿದ್ದರು.
ಅವರ ಹೇಳಿಕೆಯನ್ನು ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಂ ಹೆಗ್ಡೆ, ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ಅನೇಕರು ಬೆಂಬಲಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ನ ರಾಜ್ಯ ಮತ್ತು ರಾಷ್ಟ್ರ ನಾಯಕರು ಹಿಜಾಬ್ ಪರ ಧ್ವನಿಯೆತ್ತುತ್ತಿರುವಾಗಲೇ ಇವರ ಹೇಳಿಕೆ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ಸುರಯ್ಯ ಅಂಜುಮ್ ವಿರುದ್ಧ ಕ್ರಮಕೈಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಸಾಮೂಹಿಕ ರಾಜಿನಾಮೆ ನೀಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಒಟ್ಟಾರೆಯಾಗಿ ಯುವ ಕಾಂಗ್ರೆಸ್ ವಕ್ತಾರೆಯ ಈ ಅಚ್ಚರಿಯ ಹೇಳಿಕೆ, ಹಿಜಾಬ್ ವಿರುದ್ಧ ಹೋರಾಡುತ್ತಿರುವ ಕೇಸರಿಪಾಳಯಕ್ಕೆ ಆಹಾರವಾಗಿರುವುದಂತೂ ಸುಳ್ಳಲ್ಲ.