ಉಡುಪಿ: ಹಿಜಾಬ್ ಧರಿಸುವುದು ಸಮಾನತೆಯಲ್ಲ, ಸಮಾನತೆ ಬೇಕಾದರೆ ನೀವು ಬೇರೆ ಕಾಲೇಜ್‌ಗೆ ಹೋಗಿ ಎಂದು ಹಿಜಾಬ್ ವಿರುದ್ಧ ಹೇಳಿಕೆ ನೀಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರಯ್ಯ ಅಂಜುಮ್ ವಿರುದ್ಧ ಕಾಂಗ್ರೆಸ್ ಯಾವುದೇ ಕ್ರಮಕೈಗೊಳ್ಳದೆ ಇರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ , ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ರಾಜ್ಯ, ರಾಷ್ಟ್ರ ನಾಯಕರು ಹಿಜಾಬ್ ಧರಿಸುವುದು ಸಾಂವಿಧಾನಿಕ ಹಕ್ಕು ಎಂದು ಹಿಜಾಬ್ ಪರವಹಿಸಿ ಮಾತಾಡುತ್ತಿರುವಾಗಲೇ, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಎಂದು ಹೇಳಿಕೊಳ್ಳುವ ಸುರಯ್ಯ ಅಂಜುಮ್ ತದ್ವಿರುದ್ಧ ಹೇಳಿಕೆ ಕೊಟ್ಟಿದ್ದರು. ಇದು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.
ಸುರಯ್ಯ ಹೇಳಿಕೆಯನ್ನು ವಿರೋಧಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಕಾರ್ಯಕರ್ತರು ಜಾಲತಾಣದಲ್ಲಿ ಆಗ್ರಹಿಸಿದ್ದರು. ಆದರೆ ನಾಯಕರು ಮಾತ್ರ ಇದರ ಬಗ್ಗೆ ತಮಗರಿವಿಲ್ಲದಂತೆ ವರ್ತಿಸಿದ್ದು ಇದು ಆಕ್ರೋಶಕ್ಕೆ ಕಾರಣವಾಗಿದೆ.