ಉಪ್ಪಿನಂಗಡಿ: ರಾಜ್ಯದ ಹಲವು ಕಡೆ ಸೌಹಾರ್ದ ಕೆಡಿಸುವ ಕಾರ್ಯಗಳು ನಡೆಯುತ್ತಿದ್ದು ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮತ್ತೊಮ್ಮೆ ಸೌಹಾರ್ದಯುತ ದೃಶ್ಯಕ್ಕೆ ಇಂದು ಸಾಕ್ಷಿಯಾಯಿತು.
ಜೆ.ಎಸ್.ಬಿ ಸಮುದಾಯದ ಓಕುಳಿ ಮೆರವಣಿಗೆ ಇಂದು ಉಪ್ಪಿನಂಗಡಿ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದಾಗ ಇದೇ ವೇಳೆ ನಿನ್ನೆ ನಿಧನರಾಗಿದ್ದ ಉಪ್ಪಿನಂಗಡಿಯ ಹಿರಿಯ ವರ್ತಕ ಮೈನಾ ಹಾಜಿ ಹಸನಬ್ಬ ರವರ ಮೃತ ಶರೀರವನ್ನು ಇದೇ ವೇಳೆ ಅದೇ ಮುಖ್ಯ ರಸ್ತೆಯಲ್ಲಿ ಮುಸಲ್ಮಾನ ಬಾಂಧವರು ಪಾದಯಾತ್ರೆಯಲ್ಲಿ ಹೊತ್ತುಕೊಂಡು ಬಂದಾಗ ಜಿ.ಎಸ್.ಬಿ ಬಾಂಧವರು ಇದೇ ವೇಳೆ ತಕ್ಷಣವೇ ತಮ್ಮ ಡೋಲು,ವಾದ್ಯಗಳನ್ನು ಮತ್ತು ಬಣ್ಣ ಹಚ್ಚುವಿಕೆಯನ್ನು ನಿಲ್ಲಿಸಿ ಮೃತ ಶರೀರದ ಪಾದಯಾತ್ರೆಗೆ ಅನುವು ಮಾಡಿ ಕೊಟ್ಟರು.
ಈ ಒಂದು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದ್ದು ಸೌಹಾರ್ದ ಉಪ್ಪಿನಂಗಡಿಯ ಐಕ್ಯತೆಯನ್ನು ಪ್ರಶಂಸಿಸಿದ್ದಾರೆ.
ವೆಂಕಟ್ರಮಣ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಸಂಭ್ರಮದ ಪ್ರಯುಕ್ತ ಭಕ್ತರು ಬ್ಯಾಂಡ್, ವಾದ್ಯ ಓಲಗೊಂದಿಗೆ ಬಣ್ಣದ ಓಕೊಳಿಯನ್ನು ಎರಚಿ ಕುಣಿದು ಕುಪ್ಪಳಿಸುತ್ತಿದ್ದರು.
ಅಂತಿಮ ಯಾತ್ರೆ ಬರುತ್ತಿದ್ದಂತೆ ಚೆಂಡೆ, ಬ್ಯಾಂಡ್, ವಾದ್ಯ ಸದ್ದು ಒಮ್ಮೆಲೆ ನಿಂತು ನಲಿಯುತ್ತಿದ್ದವರು ಬದಿಗೆ ಸರಿದು ಮೌನವಾಗಿ ಎದೆ ಮೇಲೆ ಕೈ ಇಟ್ಟು ಮೈನಾ ಕಾಕನಿಗೆ ಗೌರವ ಸಲ್ಲಿಸಿದರು.
ಇತ್ತೀಚೆಗೆ ಉಪ್ಪಿನಂಗಡಿ ಠಾಣೆಯ ಎದುರು ಪಿಎಫ್ಐ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಜನಾ ತಂಡವೊಂದು ಬಂದಾಗ ಪ್ರತಿಭನಕಾರರು ದಾರಿ ಬಿಟ್ಟು ಸೌಹಾರ್ದತೆಯನ್ನು ಮೆರೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.