ಪುತ್ತೂರು: ಪುತ್ತೂರು ನಗರ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಪುತ್ತೂರಿನ ಯುವಕಾಂಗ್ರೆಸ್ ಹಾಗೂ ನಗರ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಕಡೆಗಣಿಸಿರುವುದು ಇದೀಗ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಕಾಂಗ್ರೆಸ್ ಬಣ ರಾಜಕೀಯದ ತವರೂರಾದ ಪುತ್ತೂರಿನಲ್ಲಿ ಇದೀಗ ಪದಗ್ರಹಣ ಸಮಾರಂಭದಲ್ಲೂ ಬಣರಾಜಕೀಯದ ಮೂಲಕ ಯುವಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಪುತ್ತೂರು ನಗರ ಕಾಂಗ್ರೆಸ್ಸಿನ ನೂತನ ಅಧ್ಯಕ್ಷರಾಗಿ ನೇಮಕವಾದ ಮಾಜಿ ನಗರಸಭಾ ಸದಸ್ಯ ಮಹಮ್ಮದ್ ಅಲಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ (12/02/2022) ರಂದು ಪುತ್ತೂರಿನ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಪುತ್ತೂರು ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಮುಂತಾದ ಯುವ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸದಿರುವುದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ಕುರಿತು ಕಾರ್ಯಕರ್ತರು ನಾಯಕರಿಗೆ ದೂರು ನೀಡಿದರೂ, ಸಂಭಂದಪಟ್ಟ ನಾಯಕರು ಮೌನವಹಿಸಿರುವುದರಿಂದ, ಯುವ ಕಾಂಗ್ರೆಸ್ಸಿಗರನ್ನು ಕಡೆಗಣಿಸಿರುವ ಈ ಕಾರ್ಯಕ್ರಮಕ್ಕೆ ನಾವು ತೆರಳುವುದಿಲ್ಲ ಎಂದು ಕೆಲ ಕಾರ್ಯಕರ್ತರು ಜಾಲತಾಣದಲ್ಲಿ ಬರಹ ಪ್ರಕಟಿಸಿದ್ದಾರೆ.