ಕೊಚ್ಚಿ: ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಡಿ ನೀರಿಗೆ ಬಿದ್ದು ವರ ಸಾವನ್ನಪ್ಪಿ ವಧು ಗಂಭೀರ ಗಾಯಗೊಂಡ ದುರಂತ ಘಟನೆ ಕೇರಳದ ಜನಕಿಕಾಡುವಿನ ಕುಟ್ಟಿಯಾದಿ ನದಿಯಲ್ಲಿ ನಡೆದಿದೆ.
ಮದುವೆಯ ಬಳಿಕ ಫೋಟೋಶೂಟ್ ಮಾಡಿಸಲು ಇಚ್ಛಿಸಿದ ವಧು-ವರ ಸೋಮವಾರ ಬೆಳಗ್ಗೆ ಕುಟ್ಟಿಯಾಡಿ ನದಿಯ ಹತ್ತಿರ ಬಂದಿದ್ದರು. ಕ್ಯಾಮೆರಾಗೆ ಪೋಸ್ ನೀಡುವಾಗ ವಧು ಹೈಹೀಲ್ಡ್ ಚಪ್ಪಲಿ ಹಾಕಿದ ಪರಿಣಾಮ ಆಯತಪ್ಪಿ ವಧು-ವರರ ಕಾಲು ಜಾರಿ ನದಿ ಬಿದ್ದಿದ್ದಾರೆ.
ರೆಜಿಲ್ ಎಂದು ಗುರುತಿಸಲಾದ ವರ ಪ್ರವಾಹಕ್ಕೆ ಸಿಲುಕಿ ನದಿಯಲ್ಲಿ ಮುಳುಗಿದರೆ, ಅವನ ಹೆಂಡತಿ ಕಾರ್ತಿಕಾ ಅವರನ್ನು ಸಾರ್ವಜನಿಕರು ಸಮಯಕ್ಕೆ ರಕ್ಷಿಸಿದ್ದಾರೆ. ವಧುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮಾರ್ಚ್ 14 ರಂದು ವಿವಾಹವಾದ ಜೋಡಿ, ಮದುವೆಯ ನಂತರದ ಫೋಟೋ ಶೂಟ್‌ಗಾಗಿ ನದಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಹೇಳುವ ಪ್ರಕಾರ, ನವಜೋಡಿ ಮತ್ತು ಛಾಯಾಗ್ರಾಹಕರು ನದಿಯ ಸುರಕ್ಷಿತವಲ್ಲದ ತುಂಬಾ ಆಳವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.