ಮಲಪ್ಪುರಂ: ಆಧುನಿಕ ಸಾರಿಗೆ ಸೌಲಭ್ಯಗಳು ಬರುವ ಮೊದಲು, ಹಿಂದಿನ ಕಾಲದ ಅನೇಕ ಭಾರತೀಯರು ಮೆಕ್ಕಾಗೆ ಕಾಲ್ನಡಿಗೆಯಲ್ಲೇ ಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಆದರೆ ಈ ದಿನಗಳಲ್ಲಿ ಎಲ್ಲರೂ ಸಾರಿಗೆ, ವಿಮಾನ ಪ್ರಯಾಣವನ್ನೇ ಅವಲಂಬಿಸಿದ್ದಾರೆ. ಆದರೆ ಮಲಪ್ಪುರಂನ ವಲಂಚೇರಿ ಸಮೀಪದ 30 ವರ್ಷದ ಶಿಹಾಬ್ ಚೋಟ್ಟೂರ್ ಹಜ್ ನಿರ್ವಹಿಸಲು 8,640 ಕಿಲೋಮೀಟರ್ ನಡೆಯಲು ತೀರ್ಮಾನಿಸಿದ್ದಾರೆ. ಕೇರಳದಿಂದ ಸೌದಿ ಅರೇಬಿಯಾ ದೇಶಕ್ಕೆ ಕಾಲ್ನಡಿಗೆಯ ಮೂಲಕ ಯಾತ್ರೆಗೈದು ಹಜ್ ಕರ್ಮ ನಿರ್ವಹಿಸಬೇಕು ಎನ್ನುವುದು ಅವರ ಆಸೆ.
ಅದರಂತೆಯೇ ಜೂನ್ 2 ರಂದು ಪ್ರಾರಂಭವಾಗುವ ಪ್ರಯಾಣ, 280 ದಿನಗಳಲ್ಲಿ (9 ತಿಂಗಳು) ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಮೆಕ್ಕಾಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕೆಂದು ಕನಸು ಹೊಂದಿದ್ದೆ. “ಇದೀಗ ನನ್ನ ಕನಸನ್ನು ನನಸು ಮಾಡಲು ನಿರ್ಧರಿಸಿದ್ದೇನೆ. ಹಾಗಾಗಿ ನಾನು ಈಗ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧನಿದ್ದೇನೆ ಎಂದು ಶಿಹಾಬ್ ಹೇಳುತ್ತಾರೆ. ಸರ್ವ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪುಣ್ಯ ಸ್ಥಳ ಮಕ್ಕಾಗೆ ಭೇಟಿ ನೀಡಬೇಕೆಂದು ಕಾಯುತ್ತಿರುತ್ತಾರೆ. ನಾನು ಆರೋಗ್ಯವಾಗಿದ್ದೇನೆ ಮತ್ತು ದಿನಕ್ಕೆ ಕನಿಷ್ಠ 25 ಕಿಲೋಮೀಟರ್ ನಡೆಯುತ್ತೇನೆ. ನನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರ ಬೆಂಬಲವನ್ನು ಹೊಂದಿರುವುದರಿಂದ ನಾನು ಈಗ ನಡೆದುಕೊಂಡೇ ಮಕ್ಕಾ (ಸೌದೀ ಅರೇಬಿಯಾ) ತಲುಪಬೇಕು”ಎಂದು ಅವರು ಹೇಳುತ್ತಾರೆ.
ಪ್ರಸಕ್ತ ಸೂಪರ್ ಮಾರ್ಕೆಟ್ ಉದ್ಯಮ ನಡೆಸುತ್ತಿರುವ ಶಿಹಾಬ್, ಸ್ಲೀಪಿಂಗ್ ಬ್ಯಾಗ್, ನಾಲ್ಕು ಟೀ ಶರ್ಟ್‌ಗಳು ಮತ್ತು ಪ್ಯಾಂಟ್ ಮತ್ತು ಛತ್ರಿಯನ್ನು ಒಳಗೊಂಡ ಸುಮಾರು 10 ಕೆ.ಜಿ ತೂಕದ ಲಗೇಜ್ ಅನ್ನು ತನ್ನೊಂದಿಗೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.
“ಪ್ರಯಾಣ ಮಾಡುವಾಗ ಏನಾದರೂ ಅಡೆತಡೆಗಳು ಎದುರಾದಲ್ಲಿ, ಹಣಕಾಸಿನ ಸಹಾಯ ಪಡೆಯಲು ನಾನು ಪ್ರಯಾಣ ವಿಮೆಯನ್ನು ತೆಗೆದುಕೊಳ್ಳಬೇಕಾಗಿತ್ತು. ನಂತರ, ನಾನು ಪಾಕಿಸ್ತಾನ, ಇರಾನ್, ಇರಾಕ್, ಕುವೈತ್ ಮತ್ತು ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು ವೀಸಾಗಳನ್ನು ಪಡೆಯಬೇಕಾಗಿತ್ತು. ಈ ಪ್ರಕ್ರಿಯೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಸಚಿವ ವಿ ಮುರಳೀಧರನ್ ನನಗೆ ಸಹಾಯ ಮಾಡಿದರು. ಬಹುತೇಕ ಎಲ್ಲ ಸಿದ್ಧತೆಗಳು ಮುಗಿದಿವೆ’ ಎಂದು ಅವರು ಹೇಳುತ್ತಾರೆ.
ಆರು ದೇಶಗಳ ಮೂಲಕ ನಡೆದ ನಂತರ ಅವರು ಸೌದಿ ಅರೇಬಿಯಾವನ್ನು ತಲುಪಲಿದ್ದಾರೆ. ವಾಹ್ಗಾ ವಲಯ(ಪಂಜಾಬ್- ಲಾಹೋರ್ ಗಡಿ) ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿ ಅಲ್ಲಿಂದ ಇರಾನ್, ಇರಾಕ್, ಕುವೈತ್’ಗೆ ಹೋಗಿ ನಂತರ ಸೌದಿ ಅರೇಬಿಯಾ ಪ್ರವೇಶಿಸಲಿದ್ದಾರೆ. ಸೌದಿ ತಲುಪಿ ಅವರು ಹಜ್ ನಿರ್ವಹಿಸಲಿದ್ದಾರೆ.