ಬಳ್ಳಾರಿ: ಇತ್ತೀಚೆಗೆ ಬಳ್ಳಾರಿಯ ಹೃದಯ ಭಾಗದಲ್ಲಿರುವ “ಜೋಳದ ರಾಶಿ ದೊಡ್ಡಣಗೌಡ” ರಂಗಮಂದಿರದಲ್ಲಿ “ಪಿಂಜಾರ್ ರಂಜಾನ್ ಸಾಬ್” ವೇದಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಯದ ವೇದಿಕೆಯಲ್ಲಿ ಉಪ್ಪಿನಂಗಡಿಯ ರಾಜ್ಯಪ್ರಶಸ್ತಿ ಪುರಸ್ಕ್ರುತ ಕಲಾವಿದ, ಪ್ರಸ್ತುತ ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಎಂ.ಕೆ.ಮಠ ಅವರನ್ನು ಸಚಿವ ಶ್ರೀರಾಮುಲು ಅವರು ಶಾಲು ಹೊದಿಸಿ, ನೆನಪಿನ ಕಾಣಿಕೆ ಇತ್ತು ಸನ್ಮಾನಿಸಿದರು.
ರಾಜ್ಯದಾದ್ಯಂತ ಆಯ್ದ 31 ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ, ಒಬ್ಬ ಹಿರಿಯ ಕಲಾವಿದರಿಗೆ ಜೀವಮಾನ ಸಾಧನೆ ಪ್ರಶಸ್ತಿ ವಿತರಿಸಲಾಯ್ತು.ಮಂಗಳೂರು ಜಿಲ್ಲೆಯ ರಂಗಕಲಾವಿದೆ ಮತ್ತು ಚಲನಚಿತ್ರ ಕಲಾವಿದೆ “ಸರೋಜಿನಿ ಶೆಟ್ಟಿ” ಹಾಗೂ ಉಡುಪಿ ಜಿಲ್ಲೆಯ ರಂಗಕರ್ಮಿ ಕಾರ್ಕಳದ “ಚಂದ್ರಹಾಸ ಸುವರ್ಣ” ಅವರಿಗೂ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯ್ತು.


ಈ ಸಂದರ್ಭದಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಭೀಮಸೇನ, ರಿಜಿಸ್ಟ್ರಾರ್ ಮಂಜುನಾಥ ಆರಾಧ್ಯ, ಸ್ಥಳೀಯ ಸದಸ್ಯರಾದ ಪ್ರಭುದೇವ ಕಪ್ಪಗಲ್ಲು ಹಾಗೂ ಅಕಾಡೆಮಿಯ ಇತರ ಸದಸ್ಯರೂ ಉಪಸ್ಥಿತರಿದ್ದರು.