ಬೆಳಗಾವಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೆ ಏರಿಸಿ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗಾವಿಯ ಪೋರ್ಟ್ ರಸ್ತೆಯ ಮಧ್ಯೆ ತಂತಿಯೊಂದಕ್ಕೆ ಪ್ರತಿಕೃತಿ ಗಲ್ಲಿಗೇರಿಸಲಾಗಿದೆ.
ನಡು ರಸ್ತೆಯಲ್ಲಿ ಪ್ರತಿಕೃತಿ ಗಲ್ಲಿಗೇರಿಸಿದ್ದಕ್ಕೆ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಕೃತಿ ತೆರವುಗೊಳಿಸಿದ್ದಾರೆ. ಪ್ರತಿಕೃತಿ ಮಧ್ಯರಸ್ತೆ ಜೋತುಬಿಟ್ಟಿದ್ದಕ್ಕೆ ಹಿಂದೂಪರ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗಾವಿ ನಗರದ ಪೋರ್ಟ್ ರಸ್ತೆಯಲ್ಲಿ ಕೂಡಲೇ ನೂಪುರ್ ಶರ್ಮಾ ಅವರ ಪ್ರತಿಕೃತಿ ತೆರವುಗೊಳಿಸಬೇಕು. ಭಾರತ ತಾಲಿಬಾನ್ ಅಲ್ಲ. ಇಲ್ಲಿ ಗಲ್ಲಿಗೇರಿಸುವ ಸಂಸ್ಕೃತಿ ಇಲ್ಲ. ಗಲ್ಲಿಗೇರಿಸಲು ನ್ಯಾಯಾಂಗ ಇದೆ. ನೂಪುರ ಶರ್ಮಾ ಅವರ ಹೇಳಿಕೆ ತಪ್ಪಾಗಿದ್ದರೆ ನ್ಯಾಯಾಂಗ ಕ್ರಮ ಕ್ರಮ ಕೈಗೊಳ್ಳಬೇಕು. ಕೇಸು ದಾಖಲಿಸಿ ಸಾಧ್ಯವಾದರೆ ಬಂಧಿಸಲಿ. ಆದರೆ ಈ ತರಹ ಗಲ್ಲಿಗೇರಿಸುವ ಮೂಲಕ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಹುನ್ನಾರ ನಡೆದಿದೆ. ಈ ದೃಶ್ಯ ನೋಡಿದರೆ ಸಮಾಜದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಇಂಥ ವ್ಯವಸ್ಥೆ ವಿರುದ್ಧ ಮಹಾನಗರ ಪಾಲಿಕೆ ಪಕ್ಷೇತರ ಸದಸ್ಯ ಶಂಕರ ಪಾಟೀಲ ಕಿಡಿಕಾರಿದ್ದಾರೆ.
ಘಟನೆ ಹಿನ್ನೆಲೆ:
ಟಿವಿ ಚರ್ಚೆಯೊಂದರಲ್ಲಿ ನೂಪುರ್ ಶರ್ಮಾ, ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮುಸ್ಲಿಂ ರಾಷ್ಟ್ರಗಳಾದ ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಯಿಂದ ರಾಜತಾಂತ್ರಿಕ ಪ್ರತಿಭಟನೆಯೂ ಎದುರಾಗಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದೆಲ್ಲ ಆದ ಬಳಿಕ ನೂಪುರ್ ಶರ್ಮಾ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಿದ್ದರು.
ನನ್ನ ಮಾತುಗಳು ಯಾವುದೇ ಧರ್ಮದ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದರೆ, ನಾನು ಆ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದಾರೆ. ನಾನು ಹಲವು ದಿನಗಳಿಂದ ಟಿವಿ ಚರ್ಚೆಯಲ್ಲಿ ಭಾಗವಹಿಸುತ್ತಿದ್ದೇನೆ. ಅಲ್ಲಿ ಪ್ರತಿದಿನ ನನ್ನ ಅಯೋಧ್ಯಾ, ಶಿವನನ್ನು ಅವಮಾನ ಮಾಡಲಾಗುತ್ತಿತ್ತು. ನನ್ನಲ್ಲಿ ಅದು ಶಿವಲಿಂಗ ಅಲ್ಲ ಕಾರಂಜಿ ಎಂದರು. ದಿಲ್ಲಿಯ ಪ್ರತೀ ಫುಟ್ಪಾತ್ ಮೇಲೆ ಹಲವಾರು ಶಿವಲಿಂಗಗಳು ಸಿಗುತ್ತವೆ, ಹೋಗಿ ಅಲ್ಲಿ ಪೂಜೆ ಮಾಡಿ ಎಂದಿದ್ದರು. ನನ್ನ ಮುಂದೆ ಪದೇ ಪದೇ ಈ ರೀತಿ ನಮ್ಮ ಮಹಾದೇವ ಶಿವನ ಅವಮಾನ ಮಾಡಲಾಗುತ್ತಿತ್ತು. ಹೀಗೆ ಹೇಳುವುದನ್ನು ಕೇಳಿ ಸಿಟ್ಟಿನಲ್ಲಿ ಕೆಲವು ಮಾತು ಅಂದುಬಿಟ್ಟೆ. ಒಂದುವೇಳೆ ನನ್ನ ಮಾತುಗಳಿಂದ ಯಾರದ್ದಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾನು ಆ ಮಾತನ್ನು ಹಿಂಪಡೆಯುತ್ತೇನೆ. ಯಾರಿಗಾದರೂ ನೋವುಂಟು ಮಾಡಬೇಕು ಎಂಬ ಉದ್ದೇಶ ನನಗಿರಲಿಲ್ಲ ಎಂದು ಹೇಳಿ ಕ್ಷಮೆ ಕೇಳಿದ್ದಾರೆ.