ರಾಂಚಿ: ಮದ್ಯ ಹಾಗೂ ದನದ ಮಾಂಸವನ್ನು ಸೇವಿಸಿಲು ನಿರಾಕರಿಸಿದ ಕಾರಣ ಐದು ಜನರ ಗುಂಪೊಂದು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಾರ್ಖಂಡ್‌ನ ಸಾಹಿಬ್‌ಗಂಜ್‌ನ ರಾಧಾನಗರ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಚಂದನ್ ರವಿದಾಸ್ ಥಳಿತಕ್ಕೆ ಒಳಗಾದ ವ್ಯಕ್ತಿ. ಮಿಥುನ್ ಹಾಗೂ ಇತರ ನಾಲ್ವರ ಗುಂಪು ಸೇರಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಚಂದನ್ ಶನಿವಾರ ರಾತ್ರಿ ಅಂಗಡಿ ಹೋಗಿದ್ದರು. ಅಲ್ಲೇ ಪಕ್ಕದಲ್ಲಿ ನಾಲ್ಕೈದು ಮಂದಿ ಕುಡಿಯುತ್ತಾ, ದನದ ಮಾಂಸವನ್ನು ಸೇವಿಸುತ್ತಿದ್ದರು. ಇದನ್ನು ನೋಡಿದ ಚಂದನ್ ಸಿಟ್ಟಿನಿಂದ ಗುಂಪಿನತ್ತ ನೋಡಿದ್ದಾರೆ. ಇದೇ ಕಾರಣಕ್ಕೆ ಆ ಗುಂಪು ಚಂದನ್ ಬಳಿ ಬಂದು ಆತನಿಗೆ ಬಲವಂತವಾಗಿ ಮದ್ಯ ಕುಡಿಸಲು ಯತ್ನಿಸಿದ್ದಾರೆ. ಇದಾದ ಬಳಿಕ ಬಲವಂತವಾಗಿ ದನದ ಮಾಂಸವನ್ನು ತಿನ್ನಿಸಲು ಬಂದಿದ್ದಾರೆ ಎಂದು ದೂರಿನಲ್ಲಿ ಚಂದನ್ ಆರೋಪಿಸಿದ್ದಾರೆ.
ಚಂದನ್ ಅವರ ಬಟ್ಟೆಯನ್ನು ತೆಗೆದು ವಿವಸ್ತ್ರಗೊಳಿಸಿದ್ದಾರೆ. ಆತನ ಮೇಲೆ ಕಲ್ಲು ಎಸೆದು, ಆತನಿಂದ ಮೊಬೈಲ್ ಹಾಗೂ 8000 ಸಾವಿರ ನಗದನ್ನು ಕಸಿದುಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಮಿಥುನ್ ಶೇಕ್ ಹಾಗೂ ಇತರ ನಾಲ್ವರ ವಿರುದ್ದ ಚಂದನ್ ದೂರು ನೀಡಿದ್ದು, ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.