ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮರ್ಧಾಳ ಸಮೀಪದ ನೈಲ ಸಮೀಪ ಸೋಮವಾರದಂದು ಇಬ್ಬವರನ್ನು ಬಲಿ ಪಡೆದ ಕಾಡಾನೆಯನ್ನ ಸೆರೆ ಹಿಡಿಯುವ ಕಾರ್ಯಾಚರಣೆಗೆ ಇಂದು ಮುಂಜಾನೆ ಚಾಲನೆ ನೀಡಲಾಗಿದೆ.
ಐದು ಸಾಕಾನೆ ಹಾಗೂ ನುರಿತ ತಂಡದವರ ಉಪಸ್ಥಿತಿಯಲ್ಲಿ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ಆರಂಭಗೊಂಡಿದೆ.
ನಿನ್ನೆ ಇಲ್ಲಿನ ಮರ್ಧಾಳ ನೈಲ ಎಂಬಲ್ಲಿ ಕಾಡಾನೆಯು ಯುವತಿ ಸೇರಿ ಇಬ್ಬರನ್ನು ತಿವಿದು ಕೊಂದು ಹಾಕಿತ್ತು.
ಆಕ್ರೋಶಗೊಂಡ ಸ್ಥಳೀಯರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಯನ್ನು ಸ್ಥಳಾಂತರಗೊಳಿಸದೆ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಇದಕ್ಕೆ ಮಣಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಮೃತದೇಹವನ್ನು ವಾರಸುದಾರರಿಗೆ ನೀಡಲಾಗಿತ್ತು.
‘ಆಫರೇಷನ್ ಎಲಿಫೆಂಟ್’ ಕಾರ್ಯಾಚರಣೆ:
ಊರಿಗೆ ಬಂದು ಉಪಟಳ ನೀಡಿ, ಇಬ್ಬರನ್ನೂ ಬಲಿ ತೆಗೆದುಕೊಂಡ ಕಾಡಾನೆಯನ್ನು ಸೆರೆ ಹಿಡಿಯಲು ‘ಆಫರೇಷನ್ ಎಲಿಫೆಂಟ್’ ಕಾರ್ಯಾಚರಣೆ ಆರಂಭಗೊಂಡಿದೆ.
ಎಲ್ಲಾ ಸಿದ್ಧತೆಗಳೊಂದಿಗೆ ಮಂಗಳವಾರ ಬೆಳಿಗ್ಗಿನಿಂದಲೇ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಕಾಡಾನೆಯನ್ನು ಹಿಡಿಯಲು ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ 5 ಆನೆಗಳು ಆಗಮಿಸಿದೆ.
ಕಾಡಾನೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ,ಕಂಜನ್ ಹಾಗು ಮಹೇಂದ್ರ ಎಂಬ ಸಾಕಾನೆಗಳು ಕಾರ್ಯಾಚರಣೆಗೆ ಬಂದಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಅಲ್ಲಲ್ಲಿ ವೀಕ್ಷಣೆ ನಡೆಸಿ ಹಾಗು ಡ್ರೋನ್ ಬಳಸಿ ಕಾಡಾನೆಯ ಚಲನ ವಲನಗಳನ್ನು ಪತ್ತೆ ಹಚ್ಚಿ ಸಾಕಾನೆಗಳ ಸಹಕಾರದಲ್ಲಿ ಕಾಡಾನೆಯನ್ನು ಸೆರೆ ಹಿಡಿಯಲಾಗುತ್ತದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಎಸಿಎಫ್ ಪ್ರವೀಣ್ ಕುಮಾರ್, ಕಿಶೋರ್ ಕುಮಾರ್ ,ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಆರ್.ಗಿರೀಶ್, ರಾಘವೇಂದ್ರ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಹಾಗು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ಆರಂಭಿಸಿದ್ದಾರೆ.
ನಾಗರಹೊಳೆ ಹಾಗು ಮಂಗಳೂರಿನಿಂದ ತಜ್ಞ ವೈದ್ಯಾಧಿಕಾರಿಗಳ ತಂಡವೂ ‘ಆಫರೇಷನ್ ಎಲಿಫೆಂಟ್’ ಕಾರ್ಯಾಚರಣೆಗೆ ಸಾಥ್ ನೀಡಿದೆ.
ಮತ್ತೆ ಕೃಷಿಕನ ಬಿನ್ನಟ್ಟಿದ ಕಿಲ್ಲರ್ ಆನೆ..!
ಇಂದು ಬೆಳಗ್ಗಿನ ಜಾವ 3.30ರ ಸುಮಾರಿಗೆ ನೀರು ಹಾಯಿಸಲೆಂದು ತನ್ನ ತೋಟಕ್ಕೆ ತೆರಳಿದ್ದ ವೇಳೆ ಕೃಷಿಕನೋರ್ವನನ್ನು ಮತ್ತೆ ಕಾಡಾನೆ ಬೆನ್ನಟ್ಟಿದೆ.
ಅದೃಷ್ಟವಶಾತ್ ಓಡಿ ತಪ್ಪಿಸಿದ್ದರಿಂದ ಅನಾಹುತ ತಪ್ಪಿದೆ. ಇದೇ ಗ್ರಾಮದ ಮಣಿಬಾಂಡ ಕಟ್ಟೆ ನಿವಾಸಿ ದೇವರಾಜ್ ಎಂಬವರ ಕೃಷಿ ತೋಟಕ್ಕೆ ಭಾಗಶಃ ಹಾನಿಯಾಗಿದೆ. ಕಟ್ಟೆ, ಪೆರುಂದೋಡಿ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕಾಡಾನೆಯು ಎರಡು ಜೀವಗಳನ್ನು ಬಲಿ ಪಡೆದ ಬೆನ್ನಲ್ಲೇ ಕೊಂಬಾರು ಗ್ರಾಮದ ಪೆರುಂದೋಡಿ ಎಂಬಲ್ಲಿ ಕೃಷಿಕರೋರ್ವರನ್ನು ಕಾಡಾನೆಯೊಂದು ಬೆನ್ನಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕದ ವಾತಾವರಣಕ್ಕೆ ಕಾರಣವಾಗಿದೆ.