ಉಳ್ಳಾಲ: ಇಬ್ಬರ ತಂಡವೊಂದು ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಪುರ ದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಕೋಟೆಪುರ ನಿವಾಸಿ ಸದಕತುಲ್ಲಾ (34) ಕೊಲೆಯತ್ನಕ್ಕೆ ಒಳಗಾದವರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಝಿಕ್ ಎಂಬವರು ಕೃತ್ಯ ಎಸಗಿದ ಆರೋಪಿಗಳೆಂದು ತಿಳಿದುಬಂದಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕಳೆದ ರಾತ್ರಿ ಮನೆಯಲ್ಲಿದ್ದ ಸದಕತುಲ್ಲಾರನ್ನು ಹೊರಗೆ ಕರೆಸಿದ ಆರೋಪಿಗಳು ಅಲ್ಲೇ ಚೂರಿಯಿಂದ ಹೊಟ್ಟೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆನ್ನಲಾಗಿದೆ. ಹಲ್ಲೆ ಆರೋಪಿಗಳು ಮತ್ತು ಸದಕತುಲ್ಲಾ ನಡುವೆ ಹಳೆ ವೈಷಮ್ಯವಿದ್ದು, ಇದೇ ಕಾರಣಕ್ಕೆ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ಶಾಸಕ ಯು.ಟಿ.ಖಾದರ್ ಭೇಟಿ:
ಸದಕತುಲ್ಲಾರ ಮೇಲೆ ಹಲ್ಲೆ ವಿಷಯ ತಿಳಿಯುತ್ತಲೇ ಶಾಸಕ ಯು.ಟಿ ಖಾದರ್ ಅವರು ತಡರಾತ್ರಿ 1 ಗಂಟೆ ಸುಮಾರಿಗೆ ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಲು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.