ಮಂಗಳೂರು: ನಗರದ ನಂತೂರು ಜಂಕ್ಷನ್ ಮೃತ್ಯು ಕೂಪವಾಗಿ ಪರಿಣಮಿಸಿದೆ. ಇಂದು ಅಪರಾಹ್ನ ಟಿಪ್ಪರ್ ಅಡಿಗೆ ಬಿದ್ದು ಇಬ್ಬರು ದ್ವಿಚಕ್ರ ಸವಾರರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ವೇಗವಾಗಿ ಬಂದ ಹೆದ್ದಾರಿ ಕಾಮಗಾರಿ ಈ ಟಿಪ್ಪರ್ ಅಕ್ಟಿವಾ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಕೆಳಕ್ಕೆ ಬಿದ್ದ ಸವಾರರ ಮೇಲೆಯೇ ಟಿಪ್ಟರ್ ಹರಿದಿದ್ದು ತಂದೆ ಮಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಸವಾರರ ಗುರುತು ಪತ್ತೆಯಾಗಿಲ್ಲ:
ಸ್ಕೂಟರನ್ನು ಲಾರಿ ಸುಮಾರು 10 ಮೀಟರ್ ದೂರ ಎಳೆದೊಯ್ದಿದೆ. ಲಾರಿಯ ಅಡಿ ಭಾಗದಲ್ಲಿ ಸ್ಕೂಟರ್ ಸವಾರರು ಸಿಲುಕಿ ಮೃತ ಪಟ್ಟಿದ್ದಾರೆ.
ಘಟನಾ ಸ್ಥಳದಲ್ಲಿ ಸೇರಿದ್ದ ಸ್ಥಳೀಯರು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿ ಟಿಪ್ಪರ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಅಪಘಾತದಿಂದ ಸ್ಥಳದಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸಿಪಿ ಗೀತಾ ಕುಲಕರ್ಣಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ. ಎಸಿಪಿ ಗೀತಾ ಕುಲಕರ್ಣಿ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ನಂತೂರಿನಲ್ಲಿ ಇತ್ತೀಚೆಗೆ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ಸ್ಥಳೀಯ ಪೊಲೀಸರ ದಿವ್ಯ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮೃತರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರ ಬೇಕಾಗಿದೆ. ಸದ್ಯ ಆರೋಪಿ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.