ಮಂಗಳೂರು: ಹಲಾಲ್ ಕಟ್ ವಿರುದ್ಧ ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ಏರ್ಪಡಿಸಿದ್ದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪತ್ರಕರ್ತರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಲಾಗದೆ ತಬ್ಬಿಬ್ಬಾದ ಘಟನೆ ನಡೆಯಿತು. ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಅವರು ತಡವರಿಸಿದರೆ, ಮತ್ತೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
ಈ ಬಾರಿ ಯುಗಾದಿ ಹಬ್ಬದ ಮಾರನೇ ದಿವಸ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮನೆಮನೆಯಲ್ಲಿ ಮಾಂಸದೂಟ ಏರ್ಪಡಿಲಾಗುತ್ತಿದ್ದು, ಎಲ್ಲರೂ ಜಟ್ಕಾ ಕಟ್ ಮಾಂಸವನ್ನೇ ಖರೀದಿಸಲು ಅಭಿಯಾನ ನಡೆಸುವುದಾಗಿ ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಹಲಾಲ್ ಹಿಂದು ಧರ್ಮದ ಸಂಪ್ರದಾಯವಲ್ಲ, ಹಾಗಿರುವಾಗ ನಾವ್ಯಾಕೆ ಹಲಾಲ್ ಮಾಂಸ ತಿನ್ನಬೇಕು? ಹಲಾಲ್ನಿಂದ ಜಮಾತೆ ಉಲೇಮಾ ಹಿಂದ್ ಎನ್ನುವ ಟ್ರಸ್ಟ್ಗೆ 2 ಲಕ್ಷ ಕೋಟಿ ರೂ. ಆದಾಯ ಸಂದಾಯವಾಗುತ್ತಿದೆ. ಈ ದುಡ್ಡು ಭಯೋತ್ಪಾದಕರಿಗೆ ಸಂದಾಯವಾಗುತ್ತದೆ ಎಂದು ಆರೋಪಿಸಿದರು.
ನಿಮ್ಮೂರಲ್ಲಿ ಬೀಫ್ ಸಮೋಸಾ ಮಾರುತ್ತಾರಲ್ಲವೇ?
ಈ ಬಗ್ಗೆ ಪರ್ತಕರ್ತರು ‘ನಿಮ್ಮ ಹುಟ್ಟೂರಿನ ಹುಕ್ಕೇರಿಯಲ್ಲೇ ರಸ್ತೆ ಬದಿ ಬೋರ್ಡ್ ಹಾಕಿ ಬೀಫ್ ಸಮೋಸಾ ಮಾರುತ್ತಾರಲ್ಲ? ಅದನ್ಯಾಕೆ ನಿಲ್ಲಿಸಲು ಸಾಧ್ಯವಾಗಿಲ್ಲ’ ಎಂದು ಕೇಳಿದ ಪ್ರಶ್ನೆಗೆ ಅರೆಕ್ಷಣ ಪ್ರಮೋದ್ ಮುತಾಲಿಕ್ ತಬ್ಬಿಬ್ಬಾದರು. ನಾನು ಊರು ಬಿಟ್ಟಿದ್ದೇನೆ, ನನಗೆ ಇಡೀ ಕರ್ನಾಟಕ, ಭಾರತವೇ ನನ್ನ ನಾಡು ಎಂದು ಹೇಳಿ ನುಣುಚಿಕೊಂಡರು.
ನಿಮ್ಮೂರೇ ಅಭಿವೃದ್ಧಿ ಆಗಿಲ್ಲವಲ್ಲ
ಬಳಿಕ ಕರಾವಳಿಯ ಅಭಿವೃದ್ಧಿಗೆ ಚುನಾವಣೆಗೆ ನಿಂತಿದ್ದೀರಿ, ನಿಮ್ಮ ಊರಿನಲ್ಲೇ ಸರಕಾರಿ ಆಸ್ಪತ್ರೆಯಿಲ್ಲ. ಸ್ಲಂ ಏರಿಯಾ ಅಭಿವೃದ್ಧಿ ಆಗಿಲ್ಲ. ಹಾಗಿರುವಾಗ ಕರಾವಳಿಯಲ್ಲಿ ಚುನಾವಣೆಗೆ ನಿಂತ ಉದ್ದೇಶವೇನು? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ನಮ್ಮ ಜಿಲ್ಲೆಯ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ ಎಂದಷ್ಟೇ ಹೇಳಿದರು. ಇನ್ನು ಮಹಿಳೆಗೆ ಮಾತೃ ಸ್ಥಾನ ನೀಡುವ ನಿಮ್ಮ ಬಗ್ಗೆ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡುತ್ತಿದ್ದಾರಲ್ಲವೇ ಎಂದು ಕೇಳಿದ್ದಕ್ಕೆ ‘ಯಾರೂ ಆ ಮಹಿಳೆ? ನನಗೆ ಪರಿಚಯವೇ ಇಲ್ಲ’ ಎಂದು ಹೇಳಿ ಉತ್ತರಿಸಲು ನಿರಾಕರಿಸಿದರು.
ಪ್ರವೀಣ್ ವಾಲ್ಕೆ ಸಂಘಟನೆ ಬಿಟ್ಟಿದ್ದೇಕೆ?
ಹಿಂದೂ ಸಂಘಟನೆಯಲ್ಲಿ 20ರಿಂದ 25 ವರ್ಷಗಳಷ್ಟು ದೀರ್ಘಕಾಲ ದುಡಿದ ನಾಯಕರನ್ನೇ ಸಂಘಟನೆಯಿಂದ ಅಮಾನತು ಮಾಡಿದ್ದೀರಿ? ರಾಜಕೀಯ ಉದ್ದೇಶಕ್ಕೆ ನಿಮ್ಮ ಹಿಂದುತ್ವ ವಿಚಾರಧಾರೆ ಲಘುವಾಯಿತೇ? ಎಂಬ ಪ್ರಶ್ನೆಗೆ ಇದಕ್ಕೆ ನಾನು ಉತ್ತರಿಸಲ್ಲ ಎಂದರು. ಇನ್ನು ಹಿಂದೂ ಸಂಘಟನೆ ನಾಯಕ ಪ್ರವೀಣ್ ವಾಲ್ಕೆ ನಿಮ್ಮ ಸಂಘಟನೆ ಬಿಟ್ಟಿದ್ಯಾಕೆ ಕೇಳಿದ್ದಕ್ಕೆ ‘ಆ ಬಗ್ಗೆಯೂ ನನ್ನಲ್ಲಿ ಉತ್ತರವಿಲ್ಲ’ ಎಂದು ವೌನವಾದರು.
ಕರಾವಳಿಯ ಹಿಂದೂ ಯುವಕರು ಹಿಂದುತ್ವಕ್ಕಾಗಿ ಜೀವ ತೆತ್ತಿದ್ದಾರೆ. ಅದೆಷ್ಟೋ ಕುಟುಂಬಗಳು ಸಂಕಷ್ಟದಲ್ಲಿದ್ದು ಬೀದಿ ಪಾಲಾಗುತ್ತಿವೆ. ಅವರ ಕುಟುಂಬಕ್ಕೆ ನೀವೇನು ನೆರವಾಗಿದ್ದೀರಿ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಾರುತ್ತರ ನೀಡದೆ ವೌನವಾದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆ ಮುಖಂಡ ಆನಂದ್ ಶೆಟ್ಟಿ ಅಡ್ಯಾರ್, ಕಿಶೋರ್ ಸನಿಲ್, ವೆಂಕಟೇಶ್ ಪಡಿಯಾರ್, ಹರೀಶ್ ಬೊಕ್ಕಪಟ್ನ ಉಪಸ್ಥಿತರಿದ್ದರು.