ತಮ್ಮ ನೇರ ಹೇಳಿಕೆ, ಸಿದ್ಧಾಂತಗಳ ಮೂಲಕ ಚೇತನ್ ಸುದ್ದಿ ಆಗುತ್ತಾ ಇರುತ್ತಾರೆ. ಈಗ ಅವರು ಮತ್ತೆ ಅರೆಸ್ಟ್ ಆಗಿದ್ದಾರೆ. ಶೇಷಾದ್ರಿಪುರ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದುತ್ವದ ಬಗ್ಗೆ ಚೇತನ್ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ ಎನ್ನುವ ಆರೋಪದಡಿ ಬಂಧಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅರೆಸ್ಟ್ ಮಾಡುವ ಕಾರ್ಯ ಆಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಚೇತನ್ ಅವರನ್ನು ಅರೆಸ್ಟ್ ಮಾಡಲಾಗಿತ್ತು.
ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಚೇತನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸದ್ಯ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಹಿಂದೂಪರ ಸಂಘಟನೆಗಳು ಚೇತನ್ ವಿರುದ್ಧ ದೂರು ನೀಡಿದ್ದವು. ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಚೇತನ್ ಟ್ವೀಟ್ನಲ್ಲೇನಿದೆ?
‘ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳಿಕೆ : ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಇದು ಒಂದು ಸುಳ್ಳು.
1992ರಲ್ಲಿ ಬಾಬರಿ ಮಸೀದಿ ‘ರಾಮನ ಜನ್ಮಭೂಮಿ’ ಇದು ಒಂದು ಸುಳ್ಳು.
ಈಗ 2023ರಲ್ಲಿ: ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು- ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು `ಸತ್ಯವೇ ಸಮಾನತೆ’ ಎಂದು ಅವರು ಬರೆದುಕೊಂಡಿದ್ದರು.
ಈ ಪೋಸ್ಟ್ ಅನ್ನು ಆಧರಿಸಿಯೇ ಶಿವಕುಮಾರ್ ಎಂಬುವರು ದೂರು ನೀಡಿದ್ದಾರೆ. ದೂರಿನಲ್ಲಿ ಚೇತನ್ ಅವರು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಶಿವಕುಮಾರ್. ಈ ದೂರನ್ನು ಆಧರಿಸಿ ಎಫ್ ಐ ಆರ್ ದಾಖಲಿಸಿದ್ದ ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ನನ್ನು ಬಂಧಿಸಿ, ಅವರಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
32ನೇ ಎಸಿಎಂಎಂ ನ್ಯಾಯಾಲಯಕ್ಕೆ ಚೇತನ್ ಅವರನ್ನು ಶೇಷಾದ್ರಿಪುರ ಪೊಲೀಸರು ಮಂಗಳವಾರ ಹಾಜರುಪಡಿಸಿದ್ದರು. ನ್ಯಾಯಾಧೀಶರು ಚೇತನ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.