ರಾಮನಗರ: ಗೋ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬನನ್ನು ಕೊಲೆಗೈದ ಆರೋಪದಡಿಯಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾತನೂರು ಸಮೀಪ ಪರವಾನಿಗೆ ಸಹಿತ ಸಾಗಾಟ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು, ಅಕ್ರಮ ಗೋ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇದ್ರೀಸ್ ಪಾಷಾ ಎಂಬವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಈ ಸಂಭಂಧ ಪ್ರಕರಣ ದಾಖಲಾಗಿತ್ತು.
ಇವರು ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ವೇಳೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ವಾಹನ ತಡೆದಿದೆ. ಈ ವೇಳೆ ಅದರಲ್ಲಿ ಇದ್ದ ಇದ್ರೀಸ್ ಪಾಷಾ ಮತ್ತೊಬ್ಬರು ತಪ್ಪಿಸಿಕೊಂಡಿದ್ದರು. ಅವರನ್ನು ಬೆನ್ನಟ್ಟಿದ ಕೆರೆಹಳ್ಳಿ ತಂಡ ಥಳಿಸಿ ಹತ್ಯೆ ಮಾಡಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದ್ರೀಸ್ ಅವರು ಗೋವು ಖರೀದಿಸಿದ ದಾಖಲೆಗಳನ್ನು ತೋರಿಸಿದ್ದರು. ಆದರೆ ಪುನೀತ್ ತಂಡ ₹೨ ಲಕ್ಷ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ನೀವೀಗಲೇ ಪಾಕಿಸ್ತಾನಕ್ಕೆ ಹೋಗಿ ಅಥವಾ ಎಲ್ಲರನ್ನೂ ಕೊಲ್ಲುತ್ತೇವೆ ಎಂದಿದ್ದಾರೆ. ಈ ಸಂದರ್ಭ ವಾಹನದಿಂದ ಇಳಿದು ಇದ್ರೀಸ್ ಪಾಷಾ ಅವರು ಓಡಿಹೋಗಿದ್ದರು. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಇದ್ರೀಸ್ ಶವ ಪತ್ತೆಯಾಗಿದೆ.
ಇದ್ರೀಸ್ ಪಾಷಾ ಅವರನ್ನು ಪುನೀತ್ ಕೆರೆಹಳ್ಳಿ ಹಾಗೂ ಮತ್ತಿತರರೇ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಅವರನ್ನು ಬಂಧಿಸಬೇಕು’ ಎಂದು ಆರೋಪಿಸಿ ಅವರ ಕುಟುಂಬಸ್ಥರು ಶನಿವಾರ ಸಾತನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಇಂದು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.