ಮಂಗಳೂರು: 2023 ರ ವಿಧಾನಸಭಾ ಚುನಾವಣೆಯ ಕಾವು ಬಿರು ಬೇಸಿಗೆಯ ಸುಡು ಬಿಸಿಲಿನ ಮಧ್ಯೆ ಏರುತ್ತಲೇ ಇದ್ದು, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕೂಡಾ ಏರುತ್ತಿದೆ. ಶಾಸಕ ಪಟ್ಟವನ್ನು ಪಡೆಯಲೇಬೇಕು ಎಂಬ ಮಹದಾಸೆಯಿಂದ ಪಕ್ಷದ ಹಿರಿಯ ನಾಯಕರ ಮೇಲೆ ಆಕಾಂಕ್ಷಿಗಳು ಮೇಲಿಂದ ಮೇಲೆ ಒತ್ತಡ ಹಾಕುತ್ತಿರುವುದು ಕಂಡು ಬರುತ್ತಿದೆ.
ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪಕ್ಷ ಪರವಾಗಿ ಮತ ಬೇಟೆಯಲ್ಲಿ ತೊಡಗಿಕೊಂಡಿವೆಯಾದ್ರೂ ಆನೇಕ ಕಡೆಗಳಲ್ಲಿ ತಮ್ಮ ಅಭ್ಯರ್ಥಿಗಳ ಆಯ್ಕೆ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗದೆ ಇನ್ನೂ ಗೊಂದಲದಲ್ಲಿವೆ. ಇದರಲ್ಲಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಕೂಡ ಒಂದಾಗಿದೆ. ಬಿಜೆಪಿ ಭದ್ರ ಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 7 ಬಿಜೆಪಿ ಶಾಸಕರು ಮತ್ತು ಒಂದು ಕ್ಷೇತ್ರ ಕಾಂಗ್ರೆಸ್ ಶಾಸಕರ ಹಿಡಿತದಲ್ಲಿವೆ.
ಆದರೆ ಈ ಬಾರಿ ಇಲ್ಲಿಯೂ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.
ಕಾಂಗ್ರೆಸ್ ಎರಡು ಬಾರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರೂ ಪ್ರಮುಖ ಕ್ಷೇತ್ರಗಳಾದ ಮಂಗಳೂರು ದಕ್ಷಿಣ , ಮಂಗಳೂರು ಉತ್ತರ ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡದೆ ಉಳಿಸಿಕೊಂಡಿದೆ.
ಜಿಲ್ಲೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಟಿಕೆಟ್‌ನ್ನು ರಕ್ಷಿತಾ ಶಿವರಾಂ ಪಡೆದಿದ್ದಾರೆ. ಬಂಟ್ವಾಳದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಮತ್ತು ಮೂಡಬಿದ್ರೆಯಲ್ಲಿ ಮಿಥುನ್ ರೈಗೆ ಸಿಕ್ಕಿದೆ.
ಸುಳ್ಯ ಮೀಸಲು ಕ್ಷೇತ್ರದಿಂದ ಜಿ ಕೃಷ್ಣಪ್ಪ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆಯಾದ್ರೂ ಅಲ್ಲೂ ಬಂಡಾಯ ಆರಂಭವಾಗಿದೆ.
ಉಳ್ಳಾಲದಲ್ಲಿ ಹಾಲಿ ಶಾಸಕರಾಗಿದ್ದ ಯು ಟಿ ಖಾದರ್ ಮತ್ತೆ ಮಂಗಳೂರು ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಕಮಲವನ್ನು ಮಣಿಸಿ ಕೈ ಆಡಳಿತವನ್ನು ತರಲೇಬೇಕೆಂಬ ಮಹದಾಸೆ ಇಟ್ಟುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ತೀವ್ರ ಲೆಕ್ಕಾಚಾರವನ್ನು ಇಟ್ಟುಕೊಂಡಿದ್ದು ಯಾವುದೇ ಲೋಪಗಳನ್ನು ಎಸಗದಂತೆ ಕಾರ್ಯಪ್ರವೃತ್ತವಾಗಿದೆ.
ದ.ಕ. ಜಿಲ್ಲೆಯ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಮಂಗಳೂರು ನಗರ ದಕ್ಷಿಣದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತದೆ.
ಉಳಿದಂತೆ ಉತ್ತರ ಕ್ಷೇತ್ರಕ್ಕೆ ಇನಾಯತ್ ಆಲಿ ಮತ್ತು ಪುತ್ತೂರು ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಪುತ್ತೂರಿನಲ್ಲಿ ಶಕು ಅಕ್ಕಾ ಶಾಸಕಿಯಾಗಬೇಕು ಎಂಬುದು ಕ್ಷೇತ್ರದ ಮಹಿಳಾ ಕಾರ್ಯಕರ್ತರ ಹಾಗೂ ಶಕುಂತಲಾ ಶೆಟ್ಟಿ ಅಭಿಮಾನಿಗಳ ಆಶಯ ಆಗಿದೆ.
ಇನ್ನು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡ ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ಈಗಾಗಲೇ ಕ್ಷೇತ್ರದ ಬಡ ವರ್ಗದ ಜನರಿಗೆ ಹಲವು ರೀತಿಯಾಗಿ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ. ಇವರಿಗೆ ಟಿಕೇಟ್ ಸಿಗದಿದ್ದರೆ ಮತ್ತೆ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಒಮ್ಮತ ಮೂಡದೆ ಇದ್ದುದ್ದರಿಂದ ಕಗ್ಗಾಂಟಾಗಿದೆ.