ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಎರಡು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದ ಬೆನ್ನಲ್ಲೆ, ಕಾಂಗ್ರೆಸ್ ರಾಜಕೀಯ ಗರಿಗೆದರಿದೆ.
ಕಳೆದ ಬಾರಿ ಜಿಲ್ಲೆಯಿಂದ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯಾಗಿ ಶಕುಂತಲಾ ಶೆಟ್ಟಿಯವರನ್ನು ಕಣಕ್ಕಿಳಿಸಿತ್ತು. ಆದರೆ ಅವರು ಸಂಜೀವ ಮಠಂದೂರು ಮುಂದೆ ಸೋಲನ್ನಪ್ಪಿದ್ದರು. ಈ ಬಾರಿ ಬಿಜೆಪಿ ಎರಡು ಮಹಿಳೆಯರಿಗೆ ಟಿಕೆಟ್ ಘೋಷಿಸಿದ ಬೆನ್ನಲ್ಲೆ ಕಾಂಗ್ರೆಸ್ ಕೂಡ ಪುತ್ತೂರಿನಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ ಎನ್ನಲಾಗಿದೆ.
ಈಗಾಗಲೇ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳಾಗಿ, ಶಕುಂತಲಾ ಶೆಟ್ಟಿ, ಹೇಮನಾಥ್ ಶೆಟ್ಟಿ, ಅಶೋಕ್ ರೈ ಹೀಗೆ ಹಲವರ ಹೆಸರು ಮುನ್ನೆಲೆಗೆ ಬಂದಿತ್ತು. ಇದೀಗ ಅನಿತಾ ಹೇಮನಾಥ್ ಶೆಟ್ಟಿಯವರ ಹೆಸರು ಹೈಕಮಾಂಡ್ ಮಟ್ಟಕ್ಕೆ ತಲುಪಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡದಿದ್ದಲ್ಲಿ ಎಂಟು ಕ್ಷೇತ್ರದಲ್ಲೂ ಅದು ಪ್ರಭಾವ ಬೀರುವ ಸಾಧ್ಯತೆಯಿಂದ, ಪುತ್ತೂರಿನಲ್ಲಿ ಶಕುಂತಲಾ ಶೆಟ್ಟಿ ಅಥವಾ ಹೊಸ ಮುಖವಾಗಿ ಅನಿತಾ ಹೇಮನಾಥ್ ಶೆಟ್ಟಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಒಟ್ಟಾರೆ ಪುತ್ತೂರು ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.