ಪುತ್ತೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಆದರೆ ಪುತ್ತೂರಿನ ಕಾಂಗ್ರೆಸ್ ಟಿಕೆಟ್ ಗೊಂದಲ ಸಧ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.
ಜಿಲ್ಲೆಯಲ್ಲೇ ಅತೀಹೆಚ್ಚು ಎಂಬಂತೆ ಹದಿನಾಲ್ಕು ಮಂದಿ ಆಕಾಂಕ್ಷಿಗಳಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅಂತಿಮವಾಗಿ ಮೂವರು ಹೆಸರು ಎಐಸಿಸಿ ಮಟ್ಟಕ್ಕೆ ತಲುಪಿತ್ತು ಎನ್ನಲಾಗಿದೆ. ಇದೀಗ ಅಶೋಕ್ ರೈಯವರು ಹೆಸರು ಅಂತಿಮವಾಗಿದೆ ಅನ್ನುವ ಮಾಹಿತಿ ಬರುತ್ತಿದ್ದಂತೆ ಪುತ್ತೂರಿನಲ್ಲಿ ಬಂಡಾಯದ ಬಾವುಟ ಹಾರಲಿದೆಯೇ ಅನ್ನುವ ಸಂಶಯ ಮೂಡತೊಡಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದು ಪತ್ರಿಕಾಗೋಷ್ಠಿ ನಡೆಸಿದ ಪುತ್ತೂರಿನ ಮಹಿಳಾ ಕಾಂಗ್ರೆಸಿಗರು, ಶಕುಂತಲಾ ಶೆಟ್ಟಿಯವರಿಗೆ ಟಿಕೆಟ್ ನೀಡದಿದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಎಚ್ಚರಿದ್ದರು.
ಕುಮಾರಸ್ವಾಮಿಯಿಂದ ದೂರವಾಣಿ ಕರೆ-
ಇತ್ತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರ ಪಟ್ಟಿಯಲ್ಲಿದ್ದ ಪುತ್ತೂರಿನ ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರಿಗೆ ಕುಮಾರಸ್ವಾಮಿ ದೂರವಾಣಿ ಕರೆಮಾಡಿ ಜೆಡಿಎಸ್‌ನಿಂದ ಸ್ಪರ್ಧಿಸಲು ಆಫರ್ ನೀಡಿದ್ದಾರೆ ಅನ್ನುವ ಮಾಹಿತಿ ತಿಳಿದುಬಂದಿದೆ. ಜೊತೆಗೆ ತಾನು ಪುತ್ತೂರಿಗೆ ಪ್ರಚಾರಕ್ಕೆ ಬರುವುದಾಗಿಯೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಗೊಂದಲಕ್ಕೆ ಕಾರಣವಾಗಿದೆ. ಜೆಡಿಎಸ್ ಪ್ರಭಾವಿ ನಾಯಕರನ್ನು ಸೆಳೆದು ಟಿಕೆಟ್ ನೀಡಿದ್ದೇ ಆದಲ್ಲಿ ಇಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಡುವ ಎಲ್ಲಾ ಲಕ್ಷಣಗಳೂ ದಟ್ಟವಾಗಿದೆ.