ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳು ಕಾಲೇಜು ನಿಲ್ದಾಣದ ಬಳಿ ಬಸ್ ನಿಲ್ಲಿಸುತ್ತಿಲ್ಲವೆಂದು ಅಸಮಾಧಾನಗೊಂಡು ಸರ್ಕಾರಿ ಸಾರಿಗೆ ಬಸ್ ನಿಂದ ಜಿಗಿದು ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ವಿಜಯನಗರದ ಹೂವಿನಹಡಗಲಿಯಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಏನಾಯಿತು, ಘಟನೆ ಹೇಗಾಯಿತು?:
ಶ್ವೇತಾ ಎಂಬ ವಿದ್ಯಾರ್ಥಿನಿ ಹಡಗಲಿ ಪಟ್ಟಣದ ಬಿಸಿಎಂ ಹಾಸ್ಟಲ್ ನಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಳು. ಹೂವಿನಹಡಗಲಿಯ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ E & C ವಿಭಾಗದ ಮೊದಲ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಿನ್ನೆ ಮಧ್ಯಾಹ್ನ ಕಾಲೇಜು ಬಳಿ ಘಟನೆ ನಡೆದಿದೆ. ರಾಜ್ಯ ಸಾರಿಗೆ ಬಸ್ ಹಡಗಲಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸುತ್ತಿತ್ತು. ಆ ವೇಳೆ ಕಾಲೇಜು ಬಳಿಯ ಬಸ್ ಸ್ಟಾಪ್ ನಲ್ಲಿ ಬಸ್ ಸ್ಟಾಪ್ ಮಾಡದ ಪರಿಣಾಮ ಅಸಮಾಧಾನಗೊಂಡ ವಿದ್ಯಾರ್ಥಿನಿ ಶ್ವೇತಾ ಬಸ್ ನಿಂದ ಜಿಗಿದಿದ್ದಾಳೆ.
ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ, ತೀವ್ರವಾಗಿ ಗಾಯಗೊಂಡಿದ್ದ ಶ್ವೇತಾ ಸಾವನ್ನಪ್ಪಿದ್ದಾಳೆ. ಹಡಗಲಿ ಪಟ್ಟಣದ ಬಿಸಿಎಂ ಹಾಸ್ಟಲ್ ನಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಳು.
ವಿದ್ಯಾರ್ಥಿನಿ ಸಾವಿನಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹಡಗಲಿ ಪೊಲೀಸರು ಭೇಟಿ ನೀಡಿದ್ದು, ವಿದ್ಯಾರ್ಥಿಗಳ ಮನವೊಲಿಸಲು ಯತ್ನ ನಡೆಸಿದ್ದಾರೆ. ಘಟನೆಯ ನಂತರ ಪೊಲೀಸರು ಸಾರಿಗೆ ಬಸ್ ವಶಕ್ಕೆ ಪಡೆದಿದ್ದಾರೆ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.