ಬಂಟ್ವಾಳ: KSRTC ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.
ಭೀಕರ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಇಲ್ಲಿನ ಸಮೀಪದ ಸರಪಾಡಿ ನಿವಾಸಿ ಸೇಸಪ್ಪ ಶ್ರೇಯಸ್(೩೦) ಎಂದು ತಿಳಿದು ಬಂದಿದೆ.
ಖಾಸಗಿ ಕಂಪೆನಿಯೊಂದರಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಈತ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಮರಳಿ ದ್ವಿಚಕ್ರದಲ್ಲಿ ಹೋಗುವ ವೇಳೆ ಅಪಘಾತ ಸಂಭವಿಸಿದೆ.
ಬಿಸಿರೋಡು ಕಡೆಯಿಂದ ಧರ್ಮಸ್ಥಳ ಹೆದ್ದಾರಿಯಲ್ಲಿ ಶ್ರೇಯಸ್ ಸರಪಾಡಿಯಲ್ಲಿರುವ ತನ್ನ ಮನೆಗೆ ದ್ವಿಚಕ್ರದಲ್ಲಿ ಹೋಗುತ್ತಿದ್ದ ವೇಳೆ ಧರ್ಮಸ್ಥಳ ಕಡೆಯಿಂದ ವೇಗವಾಗಿ ಬರುತ್ತಿದ್ದ ಸರಕಾರಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ದ್ವಿಚಕ್ರಕ್ಕೆ ಡಿಕ್ಕಿಯಾಗಿದೆ.
ಕೂಡಲೇ ಈತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡಯ್ಯಲಾಗಿದೆ.
ಆದ್ರೆ ಗಂಭೀರವಾಗಿ ಗಾಯಗೊಂಡಿದ್ದ ಶ್ರೇಯಸ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಅಪಘಾತ ರಭಸಕ್ಕೆ ದ್ವಿಚಕ್ರಕ್ಕೆ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಮೂರ್ತಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.