ಉಳ್ಳಾಲ: ಮನೆಯೊಳಗೆ ನಿದ್ದೆ ಮಾಡಲು ಜಾಗವಿಲ್ಲದೆಯೋ ಅಥವಾ ಬಿಸಿಲಿನ ತಾಪಕ್ಕೋ ಏನೋ ಒಂದು ತೊಂದರೆಯಿಂದ ವೃದ್ದನೊಬ್ಬ ತನ್ನ ಮನೆ ಮುಂಭಾಗದಲ್ಲಿರುವ ಬಾವಿಕಟ್ಟೆಯಲ್ಲಿ ಕೂತು ನಿದ್ರೆ ಮಂಪರಿನಿಂದ ಬಾವಿಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಮನೆ ಮುಂಭಾಗದಲ್ಲಿ ನಡೆದ ಘಟನೆಯ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ(65)
ಎಂದು ತಿಳಿದು ಬಂದಿದೆ.
ಘಟನೆಯ ವಿವರ: ವಾಲ್ಟರ್ ಶನಿವಾರ ಸಂಜೆ ತೊಕ್ಕೊಟ್ಟಿನ ಚರ್ಚ್ ಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗಿದ್ದರು.ರಾತ್ರಿ 7.23 ರ ಹೊತ್ತಿಗೆ ವಾಲ್ಟರ್ ಅವರು ಮನೆಯಂಗಳದ ಬಾವಿಯ ಕಟ್ಟೆಯಲ್ಲಿ ಕೂತು ಪ್ರಕೃತಿ ವಿಕ್ಷಣೆಯಲ್ಲಿ ತೊಡಗಿಕೊಂಡಿದ್ದ ಸಂದರ್ಭ ಅಲ್ಲಿಯೇ ನಿದ್ರೆಯ ಮಂಪರಿಗೆ ಜಾರಿ ಹಠಾತ್ತಾಗಿ ಬಾವಿಯ ಒಳಗೆ ಉರುಳಿ ಬಿದ್ದಿದ್ದಾರೆ.
ಕೂಡಲೇ ಮನೆ ಮಂದಿ ಆಳ ಇಲ್ಲದ ಬಾವಿಗೆ ಏಣಿ ಇಳಿಸಿ ವಾಲ್ಟರ್ ಅವರನ್ನ ಮೇಲಕ್ಕೆತ್ತಿದ್ದು ತಲೆಗೆ ಗಂಭೀರಗೊಂಡ ದೃಶ್ಯಾವಳಿ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.ತಲೆಗೆ ಗಂಭೀರ ಗಾಯಗೊಂಡಿದ್ದ ಕಾರಣ ಇವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದ್ದು ಮೃತರು ಪತ್ನಿ ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ.