ಪೊಲೀಸರು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಕಳ್ಳರು ದಿನೇ ದಿನೆ ತಮ್ಮ ಕೈಚಳಕ ತೋರುವುದನ್ನು ಹೆಚ್ಚು ಮಾಡುತ್ತಿದ್ದಾರೆ. ಈ ಹಿಂದೆ ಬೆಳ್ಳಂಬೆಳಗ್ಗೆ ರಂಗೋಲಿ ಬಿಡಿಸುವಾಗ ಮಹಿಳೆಯ ಕತ್ತಿಗೆ ಕೈಹಾಕಿ ಚಿನ್ನದ ಸರವನ್ನು ನಿರ್ಲಜ್ಜರಾಗಿ ಎಗರಿಸುತ್ತಿದ್ದರು. ಅಥವಾ ರಾತ್ರಿ ವೇಳೆಗಳಲ್ಲಿ ನಿರ್ಜನ ಪ್ರದೇಶಗಳನ್ನು ಗುರುತು ಮಾಡಿಕೊಂಡು ದರೋಡೆ, ಕಳ್ಳತನಕ್ಕೆ ಇಳಿಯುತ್ತಿದ್ದರು. ಆದರೆ ಈಗ ಅದಕ್ಕೆ ಸಮಯ ಸಂದರ್ಭ ಅಂತೇನೂ ಇಲ್ಲ. ಯಾವಾಗಂದರೆ ಆವಾಗ, ಜನರ ಮಧ್ಯೆಯೇ ಸರ ಎಗರಿಸಿ, ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದಾರೆ.
ಕೊರಳಲ್ಲಿ ಆಭರಣ ಧರಿಸಿದ ಮಹಿಳೆಯರು ಕಾಣಿಸಿಕೊಂಡರೆ ಸಾಕು ಕ್ಷಣಗಳಲ್ಲಿ ಅದನ್ನು ಎಳೆದುಕೊಂಡು ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನೆರೆಯ ಆಂದ್ರದಲ್ಲೂ ಹಾಡಹಗಲೇ ಕಳ್ಳನೊಬ್ಬ ಚೈನ್ ಎಗರಿಸಿದ ಘಟನೆ ಆಂಧ್ರಪ್ರದೇಶದ ಅನಂಪುರದಲ್ಲಿ ನಡೆದಿದೆೆ
ಅನಂತಪುರ ನಗರದಲ್ಲಿ ಮಾರೆಕ್ಕ ಎಂಬ ಮಹಿಳೆಯೊಬ್ಬರು ಗುರುವಾರ ಬೆಳಗ್ಗೆ ಮನೆಯ ಮುಂದೆ ಪೊರಕೆ ಹಿಡಿದು ಮನೆ ಮುಂದೆ ಸ್ವಚ್ಛಗೊಳಿಸುತ್ತಿದ್ದರು. ಸರಿಯಾಗಿ ಅದೇ ಸಮಯದಲ್ಲಿ ಪಲ್ಸರ್ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಆ ಮನೆಯ ಮುಂದೆ ನಿಂತಿದ್ದಾರೆ. ನಂತರ ಅವರಿಬ್ಬರಲ್ಲಿ ಒಬ್ಬ ಮಹಿಳೆಯ ಹತ್ತಿರ ಬಂದು ಯಾವುದೋ ಅಡ್ರಸ್ ಕೇಳಿದ್ದಾರೆ.
ಅಡ್ರೆಸ್ ಕೇಳಿದಾತನಿಗೆ ಆತನು ಕೇಳಿದ ವಿಳಾಸದ ಬಗ್ಗೆ ಮಹಿಳೆ ಮಾಹಿತಿ ನೀಡತೊಡಗಿದ್ದಾಳೆ. ಈ ಮಧ್ಯೆ ಆ ಕಡೆ ಈ ಕಡೆ ನೋಡಿದ ಕಳ್ಳರಿಬ್ಬರೂ ತಮ್ಮ ಗುರಿ ಸಾಧನೆಗಾಗಿ ಸಿದ್ಧವಾಗುತ್ತಾರೆ. ಒಬ್ಬ ಬೈಕನ್ನು ಸ್ಟಾರ್ಟ್ ಮಾಡಿಟ್ಟುಕೊಂಡು ತಾನು ಸಾಗಬೇಕಾದ ದಿಕ್ಕಿನಲ್ಲಿ ತಿರುಗಿಸಿಟ್ಟುಕೊಂಡಿದ್ದರೆ ಮತ್ತೊಬ್ಬ ಸೀದಾ ಮಹಿಳೆಯ ಕುತ್ತಿಗೆಗೆ ಕೈಹಾಕಿ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಾನೆ.
ಬೈಕ್ ಏರಿ ಇಬ್ಬರೂ ಅಲ್ಲಿಂದ ಪರಾರಿಯಾಗುತ್ತಾರೆ. 5 ನಿಮಿಷದ ಅಂತರದಲ್ಲಿ ಈ ಘಟನೆ ನಡೆದಿದೆ. ಇದರಿಂದ ಅಸಲಿಗೆ ನಡೆದಿದ್ದು ಏನು ಎಂಬುದೂ ಮಹಿಳೆಗೆ ತಕ್ಷಣಕ್ಕೆ ಗೊತ್ತಾಗದೆ, ದಿಗ್ಭ್ರಾಂತಿಗೆ ಗುರಿಯಾಗಿದ್ದಾರೆ. ಸಾವರಿಸಿಕೊಂಡ ಮಹಿಳೆ ಅಲ್ಲಿದ್ದವರಿಗೆ ಏನಾಯಿತು ಎಂದು ಹೇಳುತ್ತಾಳೆ. ಆದರೆ ಆ ವೇಳೆಗೆ ದರೋಡೆಕೋರರಿಬ್ಬರೂ ನಾಪತ್ತೆಯಾಗಿರುತ್ತಾರೆ. ಇದೆಲ್ಲಾ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಸಿಸಿಟಿವಿ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.