ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 43ನೇ ಪಂದ್ಯವು ಅಹಿತಕರ ಘಟನೆಗೆ ಸಾಕ್ಷಿಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಆರ್ಸಿಬಿ 18 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಆ ಬಳಿಕ ನಡೆದ ಆಟಗಾರರ ನಡುವಣ ಹಸ್ತಲಾಘವದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 126 ರನ್ ಕಲೆಹಾಕಿತ್ತು. ಈ ಸುಲಭ ಗುರಿ ಬೆನ್ನತ್ತಿದ ಆರ್ಸಿಬಿ ಪರ ಬೌಲರ್ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್ ತಂಡವು 108 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆರ್ಸಿಬಿ ತಂಡವು 18 ರನ್ಗಳ ಭರ್ಜರಿ ಜಯವನ್ನು ತನ್ನದಾಗಿಸಿಕೊಂಡಿತು.
ಈ ಗೆಲುವನ್ನು ವಿರಾಟ್ ಕೊಹ್ಲಿ ಭರ್ಜರಿಯಾಗಿ ಸಂಭ್ರಮಿಸಿದರು. ಆ ಬಳಿಕ ಆಟಗಾರರ ನಡುವಣ ಶೇಕ್ ಹ್ಯಾಂಡ್ ವೇಳೆ ಕೊಹ್ಲಿ ಹಾಗೂ ಲಕ್ನೋ ಆಟಗಾರರನಾದ ಮೇಯರ್ಸ್ ಪರಸ್ಪರ ಮಾತನಾಡುತ್ತಿದ್ದರು. ಇದರ ನಡುವೆ ಗೌತಮ್ ಗಂಭೀರ್ ಎಂಟ್ರಿ ಕೊಟ್ಟಿದ್ದು, ಕೊಹ್ಲಿ ಜೊತೆ ಮಾತನಾಡುತ್ತಿದ್ದ ಮೇಯರ್ಸ್’ನನ್ನು ಅಲ್ಲಿಂದ ಬೇರ್ಪಡಿಸಿದ್ದಾರೆ.
ನಂತರ ಕೊಹ್ಲಿ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಉಭಯ ತಂಡಗಳ ಆಟಗಾರರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದರು. ಇದೀಗ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಂಭೀರ್ ನಡೆಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ಜಗಳಕ್ಕೇನು ಕಾರಣ?
ಏಪ್ರಿಲ್ 10 ರಂದು..ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು 1 ವಿಕೆಟ್ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲಿಸಿತ್ತು. ಈ ಗೆಲುವಿನ ಸಂಭ್ರಮದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಆರ್ಸಿಬಿ ಪ್ರೇಕ್ಷಕರನ್ನು ಗುರಿಯಾಗಿಸಿ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ವಿರಾಟ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ಮೈದಾನದಲ್ಲಿ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದರು. 4ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ ಎಸೆತದಲ್ಲಿ ಕೃನಾಲ್ ಪಾಂಡ್ಯ ಬೌಂಡರಿ ಲೈನ್ನಲ್ಲಿದ್ದ ವಿರಾಟ್ ಕೊಹ್ಲಿ ಕ್ಯಾಚ್ ನೀಡಿದ್ದರು. ಅತ್ತ ಕ್ಯಾಚ್ ಹಿಡಿದ ಬೆನ್ನಲ್ಲೇ ಕಿಂಗ್ ಕೊಹ್ಲಿ ಪ್ರೇಕ್ಷಕರ ಗ್ಯಾಲರಿಯತ್ತ ಮುಖ ಮಾಡಿದರು.
ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೌತಮ್ ಗಂಭೀರ್ ಆರ್ಸಿಬಿ ಅಭಿಮಾನಿಗಳಿಗೆ ಹೇಗೆ ಖಡಕ್ ಸೂಚನೆ ನೀಡಿದ್ದಾರೋ ಅದೇ ಮಾದರಿಯಲ್ಲಿ ವಿರಾಟ್ ಕೊಹ್ಲಿ ಬಾಯಿ ಮುಚ್ಕೊಂಡಿರಬೇಕು ಎಂದು ಪ್ರತ್ಯುತ್ತರ ನೀಡುವ ಮೂಲಕ ಗಮನ ಸೆಳೆದರು. ಇದೇ ವಿಷಯವಾಗಿ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿಯ ನಡುವೆ ವಾಗ್ವಾದ ನಡೆದಿರುವ ಸಾಧ್ಯತೆಗಳಿವೆ.