ಲಖನೌದ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ (IPL 2023) ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವಣ 43ನೇ ಪಂದ್ಯ ರಣರೋಚಕವಾಗಿತ್ತು. ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಆರ್ಸಿಬಿ ಲೋ ಸ್ಕೋರ್ ಗೇಮ್ನಲ್ಲಿ 18 ರನ್ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯ ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಯಿತು. ಬೆಂಗಳೂರು ಆಟಗಾರರು ಎಲ್ಲ ವಿಭಾಗಗಳಲ್ಲಿ ಹಿಂದಿನ ಪಂದ್ಯದ ಸೇಡನ್ನು ತೀರಿಸಿಕೊಂಡರು. ಇದರ ನಡುವೆ ವಿರಾಟ್ ಕೊಹ್ಲಿ (Virat Kohli) ಹಾಗೂ ಗೌತಮ್ ಗಂಭೀರ್ ನಡುವೆ ದೊಡ್ಡ ಮಟ್ಟದ ಜಗಳ ಕೂಡ ನಡೆಯಿತು. ಕೇವಲ ಗಂಭೀರ್ ಜೊತೆಗೆ ಮಾತ್ರವಲ್ಲದೆ ಕೊಹ್ಲಿ ಅವರು ನವೀನ್ ಉಲ್ ಹಖ್ ಜೊತೆಗೂ ಮಾತಿನ ಚಕಮಕಿ ನಡೆಸಿದ್ದಾರೆ.
ಎಲ್ಎಸ್ಜಿ ಬ್ಯಾಟಿಂಗ್ ಇನ್ನಿಂಗ್ಸ್ನ 17ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಖ್ ನಡುವೆ ಜಗಳವಾಗಿದೆ. ಯಾವ ಕಾರಣಕ್ಕಾಗಿ ಜಗಳ ಶುರುವಾಯಿತು ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ, ಇಬ್ಬರೂ ಮುಖಾಮುಖಿಯಾಗಿ ನಿಂತು ಮಾತಿನ ಚಕಮಕಿ ನಡೆಸಿದ್ದಾರೆ. ಇವರಿಬ್ಬರ ಜಗಳ ತಾರಕಕ್ಕೇರುತ್ತೆ ಎಂಬೊತ್ತಿಗೆ ಅಮಿತ್ ಮಿಶ್ರಾ ಬಂದರು. ಅತ್ತ ಅಂಪೈರ್ ಕೂಡ ಓಡಿ ಬಂದು ಕೊಹ್ಲಿಯನ್ನು ತಡೆದರು. ಇದಾದ ಬೆನ್ನಲ್ಲೇ ಕೊಹ್ಲಿ ಅವರು ತಮ್ಮ ಶೂ ಧೂಳನ್ನು ನವೀನ್ ಕಡೆಗೆ ತೋರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ಪಂದ್ಯದ ಮಧ್ಯೆ ನಡೆದ ಜಗಳ, ಪಂದ್ಯ ಮುಗಿದ ಬಳಿಕವೂ ಮುಂದುವರೆಯಿತು. ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರು ಕೆಎಲ್ ರಾಹುಲ್ ಜೊತೆ ಮಾತನಾಡುತ್ತಿರುವಾಗ ನವೀನ್ ಉಲ್ ಹಖ್ ಕೊಹ್ಲಿ ಬಳಿ ಬಂದರೂ ಮುಖ ತಿರುಗಿಸಿಕೊಂಡು ಹೋದರು. ಅಲ್ಲದೆ ಕೊಹ್ಲಿ ಜೊತೆ ಮಾತನಾಡಲು ನಿರಾಕರಿಸಿದರು.
ಕೊಹ್ಲಿ-ಗಂಭೀರ್ ಜಗಳ:
ಪಂದ್ಯ ಮುಗಿದ ಬಳಿಕ ಆಟಗಾರರ ನಡುವಣ ಹಸ್ತಲಾಘವದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಉಭಯ ತಂಡಗಳ ಆಟಗಾರರು ಮಧ್ಯೆ ಪ್ರವೇಶಿಸಿ ತಿಳಿಸಿಗೊಳಿಸಿದರು. ಕೊಹ್ಲಿ ಅವರು ಎಲ್ಎಸ್ಜಿ ಪ್ಲೇಯರ್ ಖೈಲ್ ಮೇಯರ್ಸ್ ಜೊತೆ ಮಾತನಾಡುತ್ತಿರುವಾಗ ಗಂಭೀರ್ ಮಧ್ಯ ಪ್ರವೇಶಿಸಿ ಮೇಯರ್ಸ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಇಲ್ಲಿಂದ ಕೊಹ್ಲಿ-ಗಂಭೀರ್ ಜಗಳ ಶುರುವಾಗಿದೆ.
ಮೂವರು ಆಟಗಾರರಿಗೆ ದಂಡ ವಿಧಿಸಿದ ಬಿಸಿಸಿಐ: ಸೋಮವಾರ ಇಲ್ಲಿ ನಡೆದ ಆರ್ಸಿಬಿ vs ಎಲ್ಎಸ್ಜಿ ಪಂದ್ಯದ ನಂತರ ಮಾತಿನ ಚಕಮಕಿಗಿಳಿದ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ 100ರಷ್ಟು ದಂಡ ವಿಧಿಸಲಾಗಿದೆ. ಇದರೊಂದಿಗೆ ಲಖನೌ ವೇಗಿ ನವೀನ್ ಉಲ್ ಹಕ್ ಅವರಿಗೂ ಪಂದ್ಯದ ಸಂಭಾವನೆಯ ಶೇ 50 ರಷ್ಟು ದಂಡ ವಿಧಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆ (IPL Code of Conduct) ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ (25 ಲಕ್ಷ ರೂ.) ಹಾಗೂ ಆರ್ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ 100 ಪ್ರತಿಶತದಷ್ಟು (1.07 ಕೋಟಿ ರೂ.) ದಂಡ ವಿಧಿಸಲಾಗಿದೆ. ಐಪಿಎಲ್ ನೀತಿಸಂಹಿತೆಯ ಆರ್ಟಿಕಲ್ 2.21ರ ಅಡಿಯಲ್ಲಿ ಗೌತಮ್ ಗಂಭೀರ್ 2ನೇ ಹಂತದ ಅಪರಾಧ ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ. ಈ ನಡುವೆ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್-ಉಲ್-ಹಕ್ಗೆ ಶೇ.50 ರಷ್ಟು(1.79 ಲಕ್ಷ ರೂ.) ದಂಡ ವಿಧಿಸಲಾಗಿದೆ