ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಕಾಂಗ್ರೆಸ್ಗೆ ಭರ್ಜರಿ ಗೆಲುವು ದೊರೆಯುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಭಾವುಕರಾಗಿ ಕಣ್ಣೀರು ಹಾಕಿ ಅತ್ತರು. ಕರ್ನಾಟಕದ ಅತಿದೊಡ್ಡ ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಧನ್ಯವಾದಗಳು ಎಂದು ಅವರು ಹೇಳಿದರು.
ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ, ಕಾಂಗ್ರೆಸ್ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಬಹುಮತ ಗಳಿಸಿವುದು ಖಚಿತವಾಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿದರು.
ಈ ಮಧ್ಯೆ, ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ, ಸಚಿವ ಆರ್ ಅಶೋಕ್ ವಿರುದ್ಧ ಡಿಕೆ ಶಿವಕುಮಾರ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕನಕಪುರದಲ್ಲಿ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಆರ್.ಅಶೋಕ್ ಹೀನಾಯ ಸೋಲುಂಡಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ ಕನಕಪುರದಲ್ಲಿ ಡಿಕೆ ಶಿವಕುಮಾರ್ಗೆ ಟಕ್ಕರ್ ಕೊಡಲು ಬಿಜೆಪಿ ಸಚಿವ ಆರ್ ಅಶೋಕ್ರನ್ನು ನಿಲ್ಲಿಸಿತ್ತು. ಆದ್ರೆ ಕನಕಪುರ ಮತದಾರರು ಹೊಸ ಅಭ್ಯರ್ಥಿ ಪರ ಒಲವು ತೋರಿಸಿಲ್ಲ. ಆರ್ ಅಶೋಕ್ ಹೀನಾಯವಾಗಿ ಸೋತಿದ್ದಾರೆ. ಬಿಜೆಪಿಯ ಮಾಸ್ಟರ್ ಪ್ಲಾನ್ಗಳೆಲ್ಲವೂ ತಲೆಗೆಳಗಾಗಿವೆ. ಘಟಾನುಘಟಿಗಳ ರೋಡ್ ಶೋ, ಪ್ರಚಾರ ಯಾವುದಕ್ಕೂ ಫಲ ಸಿಕ್ಕಿಲ್ಲ. ಸದ್ಯ ಗೆಲುವಿನ ನಗೆ ಬೀರಿದ ಡಿಕೆ ಶಿವಕುಮಾರ್ ಫಲಿತಾಂಶ ಕಂಡು ಭಾವುಕರಾದರು. ಜೈಲಿನಲ್ಲಿದ್ದ ದಿನಗಳನ್ನ ಮೆಲುಕು ಹಾಕಿ ಭಾವುಕರಾಗಿ ಕಣ್ಣೀರಿಟ್ಟರು. ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಅವರು ನೋಡೋಕೆ ಬಂದ ಸನ್ನಿವೇಶ ನೆನಪಿಸಿಕೊಂಡ ಭಾವುಕರಾದರು.
ಕನಕಪುರ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಹೀಗಾಗಿ ಬಿಜೆಪಿ ಒಕ್ಕಲಿಗ ಸಮುದಾಯದ ಆರ್ ಅಶೋಕ್ರನ್ನು ನಿಲ್ಲಿಸಿತ್ತು. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 2,24,956 ಮತದಾರರಲ್ಲಿ 1,90,124 ಮತದಾನ ಮಾಡಿದ್ದರು. ಎರಡು ದಶಕಗಳ ಹಿಂದೆ ಜೆಡಿಎಸ್ ಪಾಲಿಗೆ ಭದ್ರಕೋಟೆಯಾಗಿದ್ದ ಕನಕಪುರ, ಈಗ ಡಿಕೆ ಶಿವಕುಮಾರ್ ಅವರ ಮುಷ್ಟಿಯಲ್ಲಿದೆ.