ಮಂಗಳೂರು: ಕರಾವಳಿಯಲ್ಲಿ ಹೈವೋಲ್ಟೇಜ್ ಜಿದ್ದಾಜಿದ್ದಿನಲ್ಲಿ ವಿರೋಚಿತ ಸೋಲು ಅನುಭವಿಸಿದ ಬೆನ್ನಲ್ಲೇ ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಮುಂದಿನ ಲೋಕಸಭಾ ಅಭ್ಯರ್ಥಿಯನ್ನಾಗಿಸಲು ಚಿಂತನೆ ಆರಂಭಗೊಂಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೋಷಿಯಾ ಮೀಡಿಯಾಗಳಲ್ಲಿ ಪುತ್ತಿಲ ಅಭಿಮಾನಿಗಳು ಅಭಿಯಾನವನ್ನೇ ಆರಂಭಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ವಿರುದ್ಧ ಕೇವಲ ನಾಲ್ಕು ಸಾವಿರ ಅಂತರದಲ್ಲಿ ವಿರೋಚಿತ ಸೋಲುಂಡು ಬಿಜೆಪಿಯ ಅಧಿಕೃತ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರನ್ನು ಕಮಲದ ಭದ್ರಕೋಟೆಯಲ್ಲೆ ನೆಲಕಚ್ಚಿಸಿ ಮೂರನೇ ಸ್ಥಾನಕ್ಕೆ ತಳ್ಳಿದ ಅರುಣ್ ಪುತ್ತಿಲ ಅವರನ್ನು ಮತ್ತೆ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲು ಅವರ ಆಪ್ತರು ನಿರ್ಧರಿಸಿದ್ದಾರೆ.
ಟಿಕೆಟ್ ಘೋಷಣೆಗೂ ಮುನ್ನವೇ ಅರುಣ್ ಪುತ್ತಿಲ ಅವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಪಕ್ಷವನ್ನು ಒತ್ತಾಯಿಸಿದ್ದರು. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳದ ಬಿಜೆಪಿ ಅಶಾ ತಿಮ್ಮಪ್ಪ ಗೌಡ ಅವರನ್ನು ಕಣಕ್ಕಿಳಿಸಿತು. ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಅರುಣ್ ಪುತ್ತಿಲ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು.
ಇದೀಗ ವಿರೋಚಿತ ಸೋಲು ಅನುಭವಿಸಿದರೂ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮತ್ತೆ ಪಕ್ಷೇತರರಾಗಿ ನಿಲ್ಲಬೇಕು ಎಂಬ ಕೂಗು ಇವತ್ತಿನಿಂದಲೇ ಕೇಳಿಬರುತ್ತಿದೆ. ಈ ಹಿನ್ನೆಲೆ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ನಿರ್ಧಾರ ಹೊರಬೀಳಲಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ