ರಾಜ್ಯ ವಿಧಾನಸಭೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು, ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ರವರ ಎದುರು ಸೋತಿದ್ದಾರೆ.

ಜಯನಗರದ ಎಸ್ಎಸ್ ಎಂ ಆರ್ ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆದಿದ್ದು, ಬೇರೆಲ್ಲಾ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡರೂ ಮತಗಳನ್ನು ಪರಿಗಣಿಸುವ ವಿಷಯದಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಮರು ಮತ ಎಣಿಕೆ ನಡೆದ ಕಾರಣ ಅಂತಿಮ ಫಲಿತಾಂಶ ಘೋಷಣೆ ವಿಳಂಬವಾಗಿತ್ತು. ಈ ಮಧ್ಯೆ ಮತ ಕೇಂದ್ರದ ಬಳಿ ಬಿಜೆಪಿ-ಕಾಂಗ್ರೆಸ್ ನಾಯಕರು ಧಾವಿಸಿದ್ದರು. ಈ ಹಂತದಲ್ಲಿ ನಾಯಕರ ನಡುವೆ ವಾಗ್ವಾದ ಕೂಡ ಉಂಟಾಗಿತ್ತು.
ಕೊನೆಗೂ ಫಲಿತಾಂಶ ಗೊಂದಲಕ್ಕೆ ತೆರೆ ಬಿದ್ದಿದ್ದು, ಅಧಿಕೃತ ಫಲಿತಾಂಶ ಪ್ರಕಟಗೊಂಡಿದೆ.
ಬೆಂಗಳೂರು ನಗರ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಫಲಿತಾಂಶ ಪ್ರಕಟಿಸಿದ್ದು, ಬಿಜೆಪಿ ಅಭ್ಯರ್ಥಿ ಕೆಸಿ ರಾಮಮೂರ್ತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಮ್ಯ ರೆಡ್ಡಿ ವಿರುದ್ಧ 16 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಘೋಷಿಸಿದ್ದಾರೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಸೌಮ್ಯ ರೆಡ್ಡಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಇದಕ್ಕೂ ಮುನ್ನ ಸೌಮ್ಯ ರೆಡ್ಡಿ 160 ಮತಗಳಿಂದ ಗೆದ್ದಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಮರು ಮತ ಎಣಿಕೆ ನಡೆದ ಬಳಿಕ ಚುನಾವಣಾ ಅಧಿಕಾರಿಗಳು ಅಂತಿಮ ಫಲಿತಾಂಶ ಘೋಷಿಸಿದ್ದು ಕೆಸಿ ರಾಮಮೂರ್ತಿ 16 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಘೋಷಿಸಿದ್ದಾರೆ
ಸೌಮ್ಯ ರೆಡ್ಡಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಮುಖ ಮಹಿಳಾ ನಾಯಕಿಯರಲ್ಲಿ ಒಬ್ಬರು. ವಿದ್ಯಾವಂತ ರಾಜಕಾರಣಿಯಾಗಿರುವ ಇವರು ರಾಜಕೀಯ ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಸದ್ಯ ಬೆಂಗಳೂರು ನಗರ ವ್ಯಾಪ್ತಿಯ ಜಯನಗರದ ಶಾಸಕಿಯಾಗಿರುವ ಇವರು ಈಗಾಗಲೇ ತಮ್ಮ ಅಭಿವೃದ್ಧಿ ಕೆಲಸ ಹಾಗೂ ಹೋರಾಟಗಳಿಂದ ಜನ ಮನ್ನಣೆ ಗಳಿಸಿದ್ದಾರೆ.
ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಅವರ ಪುತ್ರಿಯಾಗಿರುವ ಸೌಮ್ಯ ರೆಡ್ಡಿ, ಮಾರ್ಚ್ 18, 1983ರಲ್ಲಿ ಜನಿಸಿದರು. ತಂದೆ ರಾಮಲಿಂಗ ರೆಡ್ಡಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕಾರಣ ಸೌಮ್ಯ ರೆಡ್ಡಿ ಮೊದಲಿನಿಂದಲೂ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.
ತಂದೆಯ ಮಾರ್ಗವನ್ನೇ ಹಿಡಿದ ಸೌಮ್ಯ ರೆಡ್ಡಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ, ಪಕ್ಷದ ಸದಸ್ಯರಾದರು. ಬಳಿಕ 2016ರಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು.
ಕಾಂಗ್ರೆಸ್‌ನಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ಅವರು ವಿಧಾನಸಭೆ ಪ್ರವೇಶಿಸಲು ಜಯನಗರ ವಿಧಾಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದರು. 2018 ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೌಮ್ಯರೆಡ್ಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿದ ಪುತ್ರಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಸಾಥ್ ನೀಡಿದ್ದರು. ಜೊತೆಗೆ ಇತರ ಕಾಂಗ್ರೆಸ್ ನಾಯಕರು ಸಹ ಸಾಥ್ ನೀಡಿದ್ದರು.ಆದರೆ ಈ ಭಾರಿ ಜಿದ್ದಾಜಿದ್ದಿನ ಹೋರಾಟದ ಮೂಲಕ ಸೋತಿದ್ದಾರೆ.