ಉಪ್ಪಿನಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಕಟ್ಟಡ ವಿವಾದದಲ್ಲಿರುವಾಗಲೇ ಇದೀಗ ಮತ್ತೊಂದು ವಿವಾದ ಭುಗಿಲೆದ್ದಿದ್ದು ಅಧಿಕೃತ ಬ್ಯಾನರ್ ತೆರವುಗೊಳಿಸಲು ಪತ್ರ ಕಳುಹಿಸಿದಕ್ಕೆ ಸ್ವತಃ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯೆ ಯಮುನಾ ಮತ್ತು ಅವರ ಮಗ ಮತ್ತು ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಂಜುನಾಥ್ ಸಾಲ್ಯಾನ್ ಸೇರಿ ಪಂಚಾಯತ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ನಿನ್ನೆ ತೆಕ್ಕಾರು ಪಂಚಾಯತ್ ಕಚೇರಿಯಲ್ಲಿ ನಡೆದಿದೆ.

ಏನಿದು ಘಟನೆ?
ತೆಕ್ಕಾರು ಗ್ರಾಮ ಪಂಚಾಯತ್ ನ ನೂತನ ಕಟ್ಟಡದ ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದ್ದು ಇನ್ನು ಒಂದಿಷ್ಟು ಕೆಲಸ ಬಾಕಿಯಿದೆ ಎನ್ನುವಾಗಲೇ ಇದು ನನ್ನ ಜಾಗದಲ್ಲಿರುವ ಕಟ್ಟಡ ಇದು ನನಗೆ ಸೇರಿದ್ದು ಎಂದು ಆ ಕಟ್ಟಡದ ಸುತ್ತ ಬಿಜೆಪಿ ಬೆಂಬಲಿತ ತೆಕ್ಕಾರು ಪಂಚಾಯತ್ ಸದಸ್ಯೆ ಯಮುನಾ ಎಂಬವರು ಕಟ್ಟಡದ ಸುತ್ತ ಬೇಲಿ ಹಾಕಿದ್ದು ಪ್ರಸ್ತುತ ಪ್ರಕರಣವೂ ಜಮೀನು ವಿವಾದದಲ್ಲಿ ನ್ಯಾಯಾಲಯದ ಮೆಟ್ಟಿಲಲ್ಲಿದೆ.
ಇದೀಗ ವಿವಾದಿತ ಕಟ್ಟಡದ ಮೇಲೆ ಬಿಜೆಪಿ ನಾಯಕಿ ಯಮುನಾ ಮತ್ತು ಅವರ ಮಗ ನವೀನ್ ನಾಯ್ಕ ಹಾಗೂ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್ ಸಾಲ್ಯಾನ್, ಹಾಗು ಸುರೇಶ್ ಮರಮ ಎಂಬವರು ಸೇರಿ ಶಾಸಕ ಹರೀಶ್ ಪೂಂಜಾರಿಗೆ ಶುಭ ಕೋರಿ ಅನಧಿಕೃತ ಬ್ಯಾನರ್ ಅಳವಡಿಸಿದ್ದು.
ಬ್ಯಾನರನ್ನು ತೆರವುಗೊಳಿಸುವಂತೆ ಶನಿವಾರ ಬೆಳಿಗ್ಗೆ 11:30 ರ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಸಿಬ್ಬಂದಿ ಪ್ರಮೀಳಾ ಎಂಬವರ ಕೈಯಲ್ಲಿ ಯಮುನಾ ರವರಿಗೆ ಪತ್ರ ಕಳುಹಿಸಿದ್ದು ಪತ್ರದ ಸ್ವಿಕೃತಿಗೆ ಸಹಿ ಹಾಕಿಸಿ ಬಂದಿದ್ದರು.
ಸಹಿ ಹಾಕಿಸಿ ಬಂದ ಕೆಲವೇ ಹೊತ್ತಿನಲ್ಲಿ ಮತ್ತೆ ತೆಕ್ಕಾರು ಪಂಚಾಯತ್ ಕಚೇರಿಗೆ (ಮದ್ಯಾಹ್ನ 12:15 ರ ವೇಳೆಗೆ) ಬಂದ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯೆ ಯಮುನಾ ಮತ್ತು ಅವರ ಮಗ ಹಾಗು ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಮಂಜುನಾಥ ಸಾಲ್ಯಾನ್ ಪಂಚಾಯತ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಪ್ರಮೀಳಾ ಮತ್ತು ಪಂಚಾಯತ್ ಪಿ.ಡಿ. ಓ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಬಂದ ಮೂವರು ಆರೋಪಿಗಳ ತಂಡ ತೆಕ್ಕಾರು ಪಂಚಾಯತ್ ಕಚೇರಿಯಲ್ಲಿ ದಾಂಧಲೆ ನಡೆಸಿದ್ದು ಕಚೇರಿಯಲ್ಲಿದ್ದ ಕಡತಗಳನ್ನು ಎತ್ತಿ ಬಿಸಾಕಿದ್ದು ಮತ್ತು ಸರ್ಕಾರ ಸೌಮ್ಯದ ಒಂದು ಮೊಬೈಲ್ ಫೋನನ್ನು ಪುಡಿ ಮಾಡಿದ್ದಾರೆ. ಮತ್ತು ಮನೆ ತೆರಿಗೆಯಿಂದ ಸಂಗ್ರಹಣೆಯಾದ ಸಾವಿರಾರು ರೂಪಾಯಿಗಳನ್ನು ದೋಚಿಕೊಂಡು ಹೋಗಿದ್ದು.
ಮತ್ತು ಕರ್ತವ್ಯ ನಿರತ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಯಮುನಾ ಮತ್ತು ಅವರ ಮಗ ಹಾಗು ಮಂಜುನಾಥ್ ಸಾಲ್ಯಾನ್ ತಂಡ ಹಲ್ಲೆ ನಡೆಸಿ ಕರ್ತವ್ಯ ನಿರತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಅವಾಚ್ಯಾ ಶಬ್ದಗಳಿಂದ ಬೈದು ಪಿಡಿಓ ಮೇಲೆ ಮಾನಭಂಗಕ್ಕೆ ಯತ್ನ ನಡೆಸಿದ ನಿನ್ನ ಮೇಲೆ ಜಾತಿ ನಿಂದನೆ ಕೇಸು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ಪಿ.ಡಿ.ಓ ಸುಮಯ್ಯಾ ಎಂಬವರು ತನಗೆ ಮತ್ತು ತನ್ನ ಕಚೇರಿ ಸಿಬ್ಬಂದಿ ಪ್ರಮೀಳಾ ಎಂಬವರಿಗೆ ಜೀವ ಬೆದರಿಕೆ, ಮಾನಹಾನಿ, ಹಾಗು ಕೈಯಲ್ಲಿದ್ದ ಮನೆ ತೆರಿಗೆಯ ಹಣವನ್ನು ದೋಚಿದ್ದಾರೆ ಮತ್ತು ಸರ್ಕಾರದ ಸೌಮ್ಯದ ಮೊಬೈಲ್ ನ್ನು ಪುಡಿ ಮಾಡಿದ್ದಾರೆ ಎಂದು ಆರೋಪಿಸಿ ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಇನ್ನು ಸುಮಯ್ಯಾ ರವರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.