ಮದುವೆ ಮಂಟಪದಲ್ಲಿ ಕೊರಳಿಗೆ ಹಾರ ಹಾಕುವ ಮೊದಲು ವರನು ವರದಕ್ಷಿಣೆ ಕೇಳಿದ್ದ ಕಾರಣಕ್ಕೆ ಆಘಾತಗೊಂಡ ವಧುವಿನ ಪೋಷಕರು ವರನನ್ನು ಮರಕ್ಕೆ ಕಟ್ಟಿಹಾಕಿ ಒತ್ತೆಯಾಳನ್ನಾಗಿ ಇರಿಸಿಕೊಂಡ ಘಟನೆ ಉತ್ತರಪ್ರದೇಶದ ಪ್ರತಾಪ್ ಗಢದಲ್ಲಿ ನಡೆದಿದೆ.
ವರ ಅಮರ್ ಜಿತ್ ವರ್ಮಾ ವಿವಾಹ ಮಂಟಪದಲ್ಲಿ ವಧು-ವರ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲೇ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದನು. ಇದರಿಂದ ವಧುವಿನ ಪೋಷಕರು ಆಘಾತಕ್ಕೊಳಗಾಗಿದ್ದರು. ಬಳಿಕ ವರನನ್ನು ಮರಕ್ಕೆ ಕಟ್ಟಿಹಾಕಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಅಮರ್ ಜಿತ್ ಕುಟುಂಬ ಸದಸ್ಯರು, ಗೆಳೆಯರು ವಧುವಿನ ಸಂಬಂಧಿಕರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದು, ಇದರಿಂದಾಗಿ ಎರಡು ಕುಟುಂಬಗಳ ನಡುವೆ ಹೊಯ್ ಕೈ ನಡೆದಿರುವುದಾಗಿ ವರದಿ ತಿಳಿಸಿದೆ.
ವಧುವಿನ ಸಂಬಂಧಿಕರು ತೀವ್ರ ಆಕ್ರೋಶಗೊಂಡಿದ್ದು, ವರನನ್ನು ಹಲವು ಗಂಟೆಗಳ ಕಾಲ ಮರಕ್ಕೆ ಕಟ್ಟಿ ಹಾಕಿದ್ದರು.
ಎರಡು ಕುಟುಂಬಗಳ ಹಿರಿಯರು ಸಂಧಾನಕ್ಕಾಗಿ ಮಾತುಕತೆ ನಡೆಸಿದ್ದರೂ ಕೂಡಾ ಅದು ವಿಫಲವಾಗಿತ್ತು.
ನಂತರ ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ವರನನ್ನು ಬಂಧಮುಕ್ತಗೊಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಪೊಲೀಸ್ ಠಾಣೆಯಲ್ಲೂ ಸಂಧಾನ ವಿಫಲಗೊಂಡಿರುವುದಾಗಿ ಪೊಲೀಸ್ ಠಾಣಾಧಿಕಾರಿ ಮಂಥಾತಾ ತಿಳಿಸಿದ್ದಾರೆ.
ವರನನ್ನು ಮರವನ್ನು ಕಟ್ಟಿಹಾಕಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.