ಉಪ್ಪಿನಂಗಡಿ: ತನ್ನ ಕರುಳಕುಡಿಗೆ ಜನ್ಮ ನೀಡುವ ವೇಳೆ ತೀವ್ರ ರಕ್ತಸ್ರಾವ ಉಂಟಾಗಿ ಆಶಾ ಕಾರ್ಯಕರ್ತೆ ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿ ಭವ್ಯ (28) ಮೃತಪಟ್ಟ ಬೆನ್ನಲ್ಲೇ ಇದೀಗ ಅವರ ಹಸುಗೂಸು ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಪತ್ನಿಯ ಸಾವಿನ ಬೆನ್ನಲ್ಲೇ ತನ್ನ ಕರುಳಕುಡಿಯ ಸಾವಿನಿಂದ ಕಂಗಳಾದ ಭವ್ಯ ರ ಪತಿ ಬಾಲಕೃಷ್ಣ ರವರು ಆಸ್ಪತ್ರೆ ವೈದ್ಯಧಿಕಾರಿಗಳ ನಿರ್ಲಕ್ಷದ ವಿರುದ್ಧ ಡಿ,ಸಿ ಮತ್ತು ಡಿ,ಹೆಚ್,ಓ ಗೆ ದೂರು ನೀಡಿದ್ದಾರೆ.
ಜೂನ್ 20 ರಂದು ಹೆರಿಗೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಆಶಾ ಕಾರ್ಯಕರ್ತೆ ಭವ್ಯ ರವರು ಕಳೆದ ಮಂಗಳವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು ಈ ಬೆನ್ನಲ್ಲೇ ಭವ್ಯರವರಿಗೆ ತೀವ್ರ ರಕ್ತಸ್ರಾವ ಉಂಟಾಗಿದ್ದು ತಕ್ಷಣವೇ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.
ಹಸುಗೂಸು ಗಂಡು ಮಗುವನ್ನು ವೆನ್ಲಾಕ್ ನ ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿತ್ತು.ಆದರೆ ಹಸುಗೂಸು ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ತಾಯಿ ಮತ್ತು ಮಗುವಿನ ಮರಣದಿಂದಾಗಿ ಕುಟುಂಬ ಕಣ್ಣೀರಲ್ಲಿ ಮುಳುಗಿದ್ದು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.