ಪುತ್ತೂರು: ಜೂ.೨೫ ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ಬಿತ್ತನೆ ಕಾರ್ಯಕ್ಕೆ ಸಿದ್ದತೆ ನಡೆದಿತ್ತು. ಬಿತ್ತನೆ ಕಾರ್ಯದಲ್ಲಿ ಭಾಗವಹಿಸಲು ಶಾಸಕರು ಬೆಳಿಗ್ಗೆ ದೇವಳಕ್ಕೆ ತೆರಳಿದ್ದರು. ಕಾರಿನಿಂದ ಇಳಿದ ಶಾಸಕರನ್ನು ಕೆಲವರು ಸ್ವಾಗತಿಸಿದರು. ಶಾಸಕರ ಜೊತೆ ಇದ್ದವರು ದೇವಳದ ಒಳಗೆ ಹೋದರೆ ಶಾಸಕರು ಮುಖ್ಯ ದ್ವಾರದ ಬಳಿಯೇ ನಿಂತುಕೊಂಡಿರುವುದನ್ನು ಗಮನಿಸಿದ ಕೆಲವರು ಶಾಸಕರೇ ಬನ್ನಿ ಎಂದು ಕರೆದಿದ್ದಾರೆ. ಬರ‍್ತೇನೆ ಇಲ್ಲಿ ನನ್ನ ಕಾಣಲು ಕೆಲವರು ಬಂದಿದ್ದಾರೆ ಅವರನ್ನು ಮಾತನಾಡಿಸಿ ಬರುತ್ತೇನೆ ಎಂದು ಹೇಳಿದ್ದಾರೆ.
ದೇವಳದ ಒಳಪ್ರವೇಶ ದ್ವಾರದ ಬಳಿ ಒಂದಷ್ಟು ಜನರು ಅರ್ಜಿಯನ್ನು ಹಿಡಿದು ಶಾಸಕರಿಗಾಗಿ ಕಾಯುತ್ತಿದ್ದರು. ದೇವಳಕ್ಕೆ ಶಾಸಕರು ಬರುತ್ತಾರೆ ಎಂಬ ಸುದ್ದಿ ತಿಳಿದು ಅಲ್ಲಿಗೆ ಬಂದಿದ್ದು ಅವರನ್ನು ಕಂಡ ಕೂಡಲೇ ಶಾಸಕರು ಅವರ ಸಂಕಷ್ಟಗಳನ್ನು ಆಲಿಸಿದರು. ಮನವಿ ಪತ್ರವನ್ನು ಪಡೆದುಕೊಂಡು ಕೆಲವು ವಿಷಯಗಳಿಗೆ ಸ್ಥಳದಲ್ಲೇ ಪರಿಹಾರವನ್ನು ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹೊರಗಡೆ ತನಗಾಗಿ ಕಾಯುತ್ತಿದ್ದವರ ಕೆಲಸವನ್ನು ಮಾಡಿದ ಬಳಿಕ ಶಾಸಕರು ದೇವರ ದರ್ಶನ ಪಡೆಯಲು ದೇವಳದ ಒಳ ಪ್ರವೇಶ ಮಾಡಿದ್ದು ದೇವಸ್ಥಾನದ ದ್ವಾರದ ಬಳಿ ನಿಂತು ಜನರ ಸಂಕಷ್ಟವನ್ನು ಆಲಿಸಿದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಅನೇಕ ಮಂದಿ ಶಾಸಕರ ನಡೆಗೆ ಶಹಬ್ಬಾಸ್ ಹೇಳಿದ್ದಾರೆ.