ಪುತ್ತೂರು: ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಮತ ಪಡೆದ ಮೊದಲ ಪಕ್ಷೇತರ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದರು.
ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯು ಪುತ್ತಿಲರನ್ನು ಕಡೆಗನಿಸಿದ ಫಲವಾಗಿ ಬಿಜೆಪಿಯನ್ನು ಮಕಾಡೆ ಮಲಗಿಸಿದ ಪುತ್ತಿಲ ಪಡೆ ತದನಂತರದ ಬೆಳವಣಿಗೆಯಲ್ಲಿ ಪುತ್ತಿಲ ಪರಿವಾರ್ ಎಂಬ ಸಂಘಟನೆಯೊಂದಿಗೆ ಇದೀಗ ಮತ್ತೆ ಚುನಾವಣೆಗೆ ಸಜ್ಜಾಗಿ ನಿಂತಿದೆ.
ಇದೀಗ ಸ್ಥಳೀಯ ಪಂಚಾಯತ್ ಚುನಾವಣೆಗಳಲ್ಲೂ ಸ್ಪರ್ಧಿಸಲು ಮುಂದಾಗಿದ್ದು ನಿಡ್ಪಳ್ಳಿ ಗ್ರಾಮದ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರುವರು ಅರುಣ್ ಕುಮಾರ್ ಪುತ್ತಿಲರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪ್ರಮುಖರಾದ ಸುಧೀರ್ ರೈ ನೇಸರ ಕಂಪ, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಕುಮಾರ್ ನರಸಿಂಹ ಭಟ್, ದೇವಸ್ಯ ಶ್ರೀನಿವಾಸ್ ಭಟ್, ಸುರೇಶ್, ಸತೀಶ್ ಕೆ, ನಾರಾಯಣ ಪಾಟಾಳಿ ಸಹಿತ ಹಲವು ಮಂದಿ ಕಾರ್ಯಕರ್ತರು ನಾಮಪತ್ರ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.
ಬಿಜೆಪಿಯ ಭದ್ರಕೋಟೆಯಾಗಿರುವ ನಿಡ್ಪಳ್ಳಿ ಗ್ರಾಮಕ್ಕೆ ಪುತ್ತಿಲ ಪರಿವಾರ್ ಕಣ್ಣು ಹಾಕಿದ್ದು ಇಲ್ಲಿ ಕೂಡ ಬಿಜೆಪಿಯ ವಿರುದ್ಧ ಸೆಣಸಾಟ ನಡೆಸಿ ಮೊದಲ ಬಾರಿಗೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪುತ್ತಿಲ ಪರಿವಾರ್ ಸಂಘಟನೆಯು ಹಾಗೂ ಇದರ ಅಭ್ಯರ್ಥಿ ಗೆದ್ದು ಬರುತ್ತಾರ ಎಂದು ನೋಡಬೇಕಾಗಿದೆ.