ಪುತ್ತೂರು: ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಡ್ನೂರು ದೇವಿನಗರ ಎಂಬಲ್ಲಿರುವ ರತ್ನಾವ ತಿ ಎಂಬವರ ಮನೆ ಬರೆ ಕುಸಿದ ಕಾರಣ ಜರಿದು ಬೀಳುವ ಹಂತದ್ದಲ್ಲಿದ್ದು ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬನ್ನೂರು ಗ್ರಾಮ ಕಾಂಗ್ರೆಸ್ ಬೂತ್ ಸಮಿತಿ ವತಿಯಿಂದ ಗ್ರಾಪಂ ಪಿಡಿಒರವರಿಗೆ ಮನವಿಯನ್ನು ಸಲ್ಲಿಸಲಾಯಿತು.

ದೇವಿನಗರ ಸರ್ವೆ ನಂ ೧ರಲ್ಲಿ ಎರಡು ಸೆಂಟ್ಸ್ ಸ್ಥಳದಲ್ಲಿ ರತ್ನಾವತಿಯವರ ಮನೆ ಇದ್ದು ಅದರ ಪಕ್ಕದಲ್ಲಿರುವ ಧರೆ ಮಳೆಗೆ ಕುಸಿಯುವ ಹಂತದಲ್ಲಿದ್ದು ಧರೆ ಜರಿದರೆ ಮನೆ ಬೀಳುವ ಅಪಾಯದಲ್ಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸೇಡಿಯಾಪು- ಕುಂಟ್ಯಾನ, ಮತ್ತು ಕಜೆಯಿಂದ ಕಡಂಬು ರಸ್ತೆ ಬದಿಯಲ್ಲಿ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಈ ಭಾಗದಲ್ಲಿ ದಾರಿದೀಪವೂ ಇಲ್ಲ ಮತ್ತು ರಸ್ತೆಯ ಬದಿಗಳು ಪೊದೆಗಳಿಂದ ತುಂಬಿದ್ದು ಅವುಗಳನ್ನು ತೆರವು ಮಾಡುವಂತೆ ಮನವಿ ಮಾಡಲಾಗಿದೆ. ಬೂತ್ ಅಧ್ಯಕ್ಷರಾದ ಡೆನ್ನಿಸ್ ಮಸ್ಕರೇನಸ್, ತಾಲೂಕು ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಲತಾ ಕಜೆ, ಕಾರ್ಯದರ್ಶಿ ವಿನೋಳಿಯಾ, ರಾಮಣ್ಣ ಮೂಲ್ಯ, ಬೂತ್ ಕಾರ್ಯದರ್ಶಿ ಮೆಲ್ವಿನ್ ಸೇಡಿಯಾಪು ಮತ್ತಿತರರು ಉಪಸ್ತಿತರಿದ್ದರು. ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟದ್ದರಿಂದ ತಕ್ಷಣವೇ ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡುವುದಾಗಿ ಪಿಡಿಒ ಚಿತ್ರಾವತಿ ತಿಳಿಸಿದ್ದಾರೆ.